ಉಡುಪಿ, ಡಿ.03(DaijiworldNews/AA): ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಅಪಘಾತದಲ್ಲಿ ಒಡಿಶಾ ಮೂಲದ ಯುವಕನಿಗೆ ಗಾಯವಾಗಿದ್ದು, ಆತನನ್ನು ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ರಕ್ಷಿಸಿ, ಸೂಕ್ತ ಚಿಕಿತ್ಸೆ ಒದಗಿಸಲು ನೆರವಾದರು.
ಕೂಲಿ ಕಾರ್ಮಿಕ ಕೃಷ್ಣ (27) ಅವರಿಗೆ ಬೈಕ್ ಢಿಕ್ಕಿ ಹೊಡೆದು ಹೊಟ್ಟೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ಬಳಿಕ ಅವರನ್ನು ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಿ ಕೊಟ್ಟಿದ್ದರು. ಆದರೆ ಶಸ್ತ್ರಚಿಕಿತ್ಸಾ ವಿಭಾಗ ದುರಸ್ತಿಯಲ್ಲಿದೆ ಎಂಬ ಕಾರಣಕ್ಕೆ ಚಿಕಿತ್ಸೆ ನೀಡದೆ ಆಸ್ಪತ್ರೆಯವರು ಹಿಂದಕ್ಕೆ ಕಳುಹಿಸಿದ್ದರು. ನಂತರ ವಿಶು ಶೆಟ್ಟಿ ಅವರು ಆತನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಈ ಬಗ್ಗೆ ವಿಶು ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು, ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆಯ ವಿಭಾಗ ದುರಸ್ತಿಯಲ್ಲಿದ್ದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡುವ ಜವಾಬ್ದಾರಿ ಆಯಾ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆಯದ್ದಾಗಿದೆ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದಾದರೆ ಈ ಬಗ್ಗೆ ತುರ್ತು ಪತ್ರಿಕಾ ಪ್ರಕಟನೆ ನೀಡಿ ರೋಗಿಗಳ ಪ್ರಾಣ ಉಳಿಸುವ ಮಾನವೀಯತೆಯನ್ನು ಅಸ್ಪತ್ರೆ ತೋರಿಸ ಬೇಕಾಗಿತ್ತು. ಆದರೆ ಅಷ್ಟು ದೂರದಿಂದ ಬಂದ ರೋಗಿಯು ಗಂಭೀರತೆಯನ್ನು ಅರಿಯದೆ ಅವರ ಜೀವದೊಡನೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.