ಬಂಟ್ವಾಳ,ಡಿ.03 (DaijiworldNews/TA):ತುಳುನಾಡಿನ ವಧುವನ್ನು ಪಂಜಾಬಿಯ ವರನಿಗೆ ಕನ್ಯಾದಾನ ಮಾಡಿದ ಅಪರೂಪದ ಪ್ರಸಂಗವೊಂದು ಇತ್ತೀಚೆಗೆ ನಡೆಯಿತು. ತುಳುನಾಡಿನಲ್ಲಿ ನಡೆಯುವ ಅಳಿಯ ಕಟ್ಟಿನ ಮದುವೆಯನ್ನು ಪಂಜಾಬ್ ರಾಜ್ಯದ ಕುಟುಂಬವೊಂದು ಅಪ್ಪಿಕೊಂಡು ಒಪ್ಪಿಕೊಂಡಿರುವುದು ನಿಜಕ್ಕೂ ತುಳುನಾಡಿಗೆ ಹೆಮ್ಮೆ. ಬಡಗಬೆಳ್ಳೂರು ಗ್ರಾಮದ ಪರಿಮೊಗರು ನಿವಾಸಿ ಪ್ರಕಾಶ್ ಶೆಟ್ಟಿ ಅವರ ಪ್ರಥಮ ಪುತ್ರಿ ಪುಣ್ಯ ಅವರ ವಿವಾಹವು ಪಂಜಾಬ್ ರಾಜ್ಯದ ಸಂಜೀವ ಶರ್ಮ ಎಂಬವರ ಮಗ ಉತ್ಕರ್ಷ ಅವರ ಜೊತೆ ನ.27 ರಂದು ಪಂಜಾಬ್ ಲುದಿನಾದ ಅಂಬ್ರೋಸಿಯಾ ಗ್ರ್ಯಾಂಡ್ ರೆಸಾರ್ಟ್ ನಲ್ಲಿ ಸಂಭ್ರಮದಿಂದ ನಡೆಯಿತು.
ಉನ್ನತ ವಿದ್ಯಾಭ್ಯಾದ ಉದ್ದೇಶದಿಂದ ಅಮೇರಿಕಾದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಪರಿಚಯವಾದ ಇವರಿಬ್ಬರ ಸ್ನೇಹ ಮುಂದೆ ಸಾಗಿ ಮದುವೆ ಎಂಬ ಮೂರಕ್ಷದ ಗಂಟು ಕಟ್ಟುವರೆಗೂ ತಲುಪಿತು. ಅಮೇರಿಕಾದ ವರನಿಗೆ ಅಥವಾ ವಧುವಿಗೆ ತುಳುನಾಡಿನ ವರ ಅಥವಾ ವಧು ಎಂಬ ಸಂಬಂಧಗಳು ಅನೇಕ ನಡೆದಿವೆ, ಅದು ದೊಡ್ಡ ಸಂಗತಿಯಾಗದೆ ಇರಬಹುದು. ಆದರೆ ಹೊರರಾಜ್ಯವಾದ ಪಂಜಾಬ್ ನ ವರ ಬಂಟ್ವಾಳದ ಬಂಟ ಸಮುದಾಯದ ವಧುವನ್ನು ತುಳುನಾಡಿನ ಅಳಿಯ ಕಟ್ಟು ಪ್ರಕಾರದ ಮದುವೆ ಮೂಲಕ ವರಿಸಿದ್ದಾನೆ ಎಂಬುದು ಉಲ್ಲೇಖನೀಯ ಅಂಶವಾಗಿದೆ.
ಅತ್ಯಂತ ಪುರಾತನವಾದ ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯ ಬದ್ದವಾದ ಮದುವೆಗೆ ಸಾಕ್ಷಿಯಾಗಿ, ಭೂಮಿ ಸಾಕ್ಷಿಯಾದ ಮದುವೆಯನ್ನು ಪಿ.ಕಿಶೋರ್ ಭಂಡಾರಿ ಬಡಗಬೆಳ್ಳೂರು ಇವರ ಮಾರ್ಗದರ್ಶನದಲ್ಲಿ ಮಂಗಳೂರಿನ ರಾಕೇಶ್ ಸಾಲಿಯಾನ್ ಪಚ್ಚನಾಡಿ ಅವರು ನೆರವೇರಸಿಕೊಟ್ಟರು.