ಮಂಗಳೂರು,ಡಿ.03 (DaijiworldNews/TA):ಫೆಂಗಲ್ ಚಂಡಮಾರುತದ ಅಬ್ಬರದ ಪರಿಣಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟವೂ ಜೋರಾಗಿದೆ. ಭಾರೀ ಮಳೆಯಿಂದಾಗಿ ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದೆ. ಬಜ್ಪೆ -ಅದ್ಯಪಾಡಿಯ ಸಂಪರ್ಕ ಕಡಿತವಾಗಿದೆ.
ಮಂಗಳೂರು ವಿಮಾನನಿಲ್ದಾಣ ಕೆಳಭಾಗದಲ್ಲಿ ಅದ್ಯಪಾಡಿ ಪ್ರದೇಶ ಇದ್ದು ವಿಮಾನ ನಿಲ್ದಾಣದ ಭಾಗದಿಂದ ನೀರು ಹರಿದು ನೀರಿನೊಂದಿಗೆ ಮಣ್ಣು ಸವೆದು ಹರಿದು ಬಂದಿದೆ. ಹೀಗಾಗಿ ತಗ್ಗು ಪ್ರದೇಶದಲ್ಲಿರುವ ಮನೆಯ ಅಂಗಳದಲ್ಲಿ ಕೆಸರು ತುಂಬಿಕೊಂಡಿದೆ. ಭಾರೀ ಗಾಳಿ ಮಳೆಗೆ ಈ ಭಾಗದಲ್ಲಿ ವಿದ್ಯುತ್ ಕಂಬಗಳೂ ಕೂಡಾ ಧರಶಾಹಿಯಾಗಿವೆ.
ತಗ್ಗು ಪ್ರದೇಶದ ಮನೆಯ ಅಂಗಳದಲ್ಲಿ ಕೆಸರು ತುಂಬಿಕೊಂಡ ಪರಿಣಾಮ ಜನಸಂಚಾರಕ್ಕೂ ತೊಡಕಾಗಿದೆ. ಮಂಗಳೂರು ಏರ್ಪೋರ್ಟ್ ನಿರ್ಲಕ್ಷದಿಂದ ಭೂಕುಸಿತವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಜೊತೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸ್ಥಳಕ್ಕೆ ಪರಿಶೀಲನೆಗೆ ಬಂದ ತಹಶೀಲ್ದಾರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.