ಸುಳ್ಯ,ಡಿ.04(DaijiworldNews/TA): ಕಳೆದ ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳನನ್ನು ಪೈಚಾರಿನ ಯುವಕರೇ ಛಲ ಬಿಡದೆ ಹಗಲಿರುಳು ಹುಡುಕಾಟ ನಡೆಸಿ ಕೊನೆಗೂ ಕಳ್ಳನನ್ನು ಹಿಡಿದು ತಂದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ನ 30 ರಂದು ನಡೆದಿದ್ದ ಹೊಟೇಲ್ ಕಳ್ಳತನದ ಬಳಿಕ ಸ್ಥಳೀಯ ಯುವಕರು ಈತನ ಪತ್ತೆ ಗಾಗಿ ಹಗಲು ರಾತ್ರಿ ಎನ್ನದೇ ಗುಂಡ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಕಲ್ಲುಗುಂಡಿ ಮುಂತಾದ ಕಡೆಗಳಿಗೆ ಇಬ್ಬರು, ಮೂವರ ತಂಡವನ್ನು ಮಾಡಿ ಕಳ್ಳನ ಹುಡುಕಾಟಕ್ಕೆ ಮುಂದಾಗಿದ್ದರು. ಕಳ್ಳನ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ಈತನನನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಪ್ರಸಾರ ಪಡಿಸಿದ್ದರು.
ಪುತ್ತೂರು ಭಾಗದಲ್ಲಿ ಹುಡುಕಾಟ ನಡೆಸುತಿದ್ದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದ ಓರ್ವರಿಗೆ ಈ ಕಳ್ಳನನ್ನು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಕಂಡಿದ್ದು ಕೂಡಲೇ ಅಲ್ಲಿ ಹುಡುಕಾಟ ನಡೆಸುತಿದ್ದ ತಂಡಕ್ಕೆ ಮಾಹಿತಿ ಬಂದು ತಕ್ಷಣ ಅಲ್ಲಿಗೆ ತೆರಳಿ ಕಳ್ಳನನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಆತನನ್ನು ಸುಳ್ಯಕ್ಕೆ ತಂದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಹೆಸರು ಮತ್ತು ಊರಿನ ಬಗ್ಗೆ ಸ್ಪಷ್ಟವಾಗಿ ಆತ ಹೇಳುತಿಲ್ಲ ಎಂದು ಕೂಡ ತಿಳಿದು ಬಂದಿದೆ.