ಬಂಟ್ವಾಳ,ಡಿ.04 (DaijiworldNews/TA):ತಾಲೂಕು ಕೇಂದ್ರದಿಂದ ಸರಪಾಡಿ, ಅಜಿಲಮೊಗರು ಭಾಗವನ್ನು ಸಂಪರ್ಕಿಸುವ ಅತಿ ಸಮೀಪದ ರಸ್ತೆಯಾಗಿರುವ ಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ ರಸ್ತೆಯು ನೇತ್ರಾವತಿ ಕಿನಾರೆಯಲ್ಲೇ ಸಾಗುತ್ತಿದ್ದು, ಪೆರ್ಲ ಭಾಗದಲ್ಲಿ ಪೂರ್ತಿ ನೀರು ನಿಂತಿರುವ ನದಿಯಂಚಿನಲ್ಲೇ ಸಾಗುತ್ತಿದೆ. ಪ್ರಸ್ತುತ ಇಲ್ಲಿ ನಿರ್ಮಿಸಿರುವ ತಡೆಗೋಡೆಯ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ಅದರ ನಿರ್ವಹಣೆಯ ಭಾಗವಾಗಿ ತಡೆಗೋಡೆಯನ್ನು ದುರಸ್ತಿಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಶಂಭೂರು ಎಎಂಆರ್ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿರುವ ಪರಿಣಾಮ ಸರಪಾಡಿ ಭಾಗದಲ್ಲಿ ವರ್ಷಪೂರ್ತಿ ಅದರ ಹಿನ್ನೀರಿ ನದಿಯಲ್ಲಿ ತುಂಬಿರುತ್ತಿದ್ದು, ರಸ್ತೆಯು ನದಿಯಂಚಿನಲ್ಲೇ ಸಾಗುತ್ತಿದೆ. ಪೆರ್ಲ ಭಾಗದಲ್ಲಿ ಅಣೆಕಟ್ಟು ನಿರ್ಮಾಣದ ಸಂದರ್ಭ ತಡೆಗೋಡೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಸಲಾಗಿದ್ದು, ಅದರ ಬಳಿಕ ತಡೆಗೋಡೆಯ ನಿರ್ವಹಣೆಯನ್ನು ಮಾಡಿಲ್ಲ. ಒಂದಷ್ಟು ಕಡೆಗಳಲ್ಲಿ ನದಿಯ ಒಳಭಾಗದಲ್ಲಿ ತಡೆಗೋಡೆಗೆ ಹಾನಿಯಾಗಿದೆ ಎನ್ನಲಾಗಿದ್ದು, ಹೀಗಾಗಿ ಅದರ ದುರಸ್ತಿಗೆ ಆಗ್ರಹಿಸುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ರಸ್ತೆ ಸಮನಾಗಿ ನೀರಿರುತ್ತಿದ್ದು, ಪ್ರವಾಹದ ಸಂದರ್ಭದಲ್ಲಿ ರಸ್ತೆಗೂ ನೀರು ಬೀಳುತ್ತದೆ.
ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ನದಿಯ ನೀರನ್ನು ಕಂಡರೆ ಆತಂಕ ಪಡುವ ಮಟ್ಟಿಗೆ ಅಬ್ಬರ ಇರುತ್ತದೆ. ಇಂತಹ ಪರಿಸ್ಥಿತಿ ಇರುವ ತಡೆಗೋಡೆಗೆ ಹಾನಿಯಾದರೆ ರಸ್ತೆ ನೀರು ಪಾಲಾಗುವ ಜತೆಗೆ ವಾಹನಗಳು ಕೂಡ ಅಪಾಯದ ಸ್ಥಿತಿ ಎದುರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಽಕಾರಿ ವರ್ಗ ಇತ್ತ ಗಮನಹರಿಸಿ ತಡೆಗೋಡೆಯನ್ನು ದುರಸ್ತಿ ಪಡಿಸಬೇಕು ಎನ್ನು ಆಗ್ರಹಿಸಲಾಗುತ್ತಿದೆ.
ತಡೆಗೋಡೆಗೆ ಅಲೆಗಳ ಬಡಿತ : ಅಣೆಕಟ್ಟಿನ ಹಿನ್ನೀರು ವರ್ಷಪೂರ್ತಿ ತುಂಬಿರುತ್ತಿದ್ದು, ಸಂಜೆಯ ವೇಳೆ ಅಲೆಗಳ ರೀತಿ ನೀರು ತಡೆಗೋಡೆಗೆ ಬಡಿಯುತ್ತಿರುತ್ತದೆ. ಈ ಸಂದರ್ಭ ಒಳಭಾಗದ ಮಣ್ಣು ಸವೆದು ಹೋಗಿರುವ ಸಾಧ್ಯತೆಯಳಿದ್ದು, ಇದರಿಂದ ರಸ್ತೆಗೂ ಅಪಾಯವಿದೆ. ಹೀಗಾಗಿ ನೀರು ತಡೆಗೋಡೆಯ ಒಳಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕಿದೆ.
ಬೀಯಪಾದೆವರೆಗೆ ರಸ್ತೆ ಕಿರಿದು: ಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ-ಸರಪಾಡಿ ರಸ್ತೆಯು ಪ್ರಸ್ತುತ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡಿದ್ದು, ಬಂಟ್ವಾಳ ಶಾಸಕರ ೩ ಕೋ.ರೂ.ವೆಚ್ಚದ ಅನುದಾನದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆಯೂ ನಿರ್ಮಾಣಗೊಂಡಿದೆ. ಹೀಗಾಗಿ ರಸ್ತೆಯಲ್ಲಿ ವಾಹನಗಳ ಓಡಾಟ ಗಣನೀಯ ಏರಿಕೆಯಾಗಿದ್ದು, ಪೆರ್ಲ ಎಂಆರ್ಪಿಎಲ್ ಪಂಪುಹೌಸ್ನಿಂದ ಬೀಯಪಾದೆವರೆಗಿನ ರಸ್ತೆ ಕಿರಿದಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ದಿನವಿಡೀ ವಾಹನ ಓಡಾಟ ಇರುವುದರಿಂದ ಎರಡು ವಾಹನಗಳ ಏಕಕಾಲದಲ್ಲಿ ಎದುರು ಬದುರಾದರೆ ಒಂದಷ್ಟು ಅಡ್ಡಿ ಉಂಟಾಗುತ್ತದೆ. ಹೀಗಾಗಿ ಈ ಭಾಗದಲ್ಲಿ ರಸ್ತೆಯನ್ನು ಅಗಲೀಕರಣ ಗೊಳಿಸುವ ಕುರಿತು ಕೂಡ ಆಗ್ರಹಿಸಲಾಗಿದೆ.
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ಬಿ.ಸಿ.ರೋಡು ಭಾಗದಿಂದ ಉಪ್ಪಿನಂಗಡಿ ಸಂಪರ್ಕಿಸುವವ ಒಂದಷ್ಟು ಮಂದಿ ಪರ್ಯಾಯವಾಗಿ ಇದೇ ರಸ್ತೆಯನ್ನು ಬಳಸುತ್ತಿದ್ದು, ಈ ಕಾರಣದಿಂದಲೂ ವಾಹನಗಳ ಓಡಾಟ ಹೆಚ್ಚಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿ ವರ್ಗ ರಸ್ತೆಯನ್ನು ಅಗಲಗೊಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ.