ಕುಂದಾಪುರ, ಡಿ.22(DaijiworldNews/AA): ಅಂಬರ್ ಗ್ರೀಸ್ ಮಾರಾಟ ಜಾಲದ ಶಂಕೆಯ ಹಿನ್ನೆಲೆಯಲ್ಲಿ ಕೋಡಿ ಸಮೀಪದ ಎಂಕೋಡಿಯ ಸೌಹಾರ್ದ ಭವನದಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಸಂಚಾರಿ ದಳದ (ಫಾರೆಸ್ಟ್ ಸಿಐಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ಪೈಕಿ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಕೋಡಿಯ ನಿವಾಸಿಗಳಾದ ಅಬೂಬಕ್ಕರ್ (50), ಹಸೈನಾರ್ (57), ಉಬೈದುಲ್ಲಾ (40) ಹಾಗೂ ಬೈಂದೂರಿನ ಮಹಮ್ಮದ್ ಅಲಿ (50) ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಡಿ.18ರ ಮಧ್ಯಾಹ್ನ ಅರಣ್ಯ ಸಂಚಾರಿ ದಳದ ಮಂಗಳೂರಿನ ಎಸ್ಐ ಜಾನಕಿ ನೇತೃತ್ವದ ತಂಡವು ಅಂಬರ್ ಗ್ರೀಸ್ ಮಾರಾಟ ಶಂಕೆಯ ಹಿನ್ನೆಲೆಯಲ್ಲಿ ದಾಳಿ ನಡೆಸಿತ್ತು. ಈ ಸಂದರ್ಭ ಅಲ್ಲಿದ್ದ ಕೆಲವರು ಅಧಿಕಾರಿಗಳನ್ನು ಕಟ್ಟಿಹಾಕಿ, ಹಲ್ಲೆ ನಡೆಸಿದ್ದರು. ಪರಿಣಾಮ ಕೆಲ ಅಧಿಕಾರಿಗಳು ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಎಸ್ಐ ಜಾನಕಿ ಅವರು ನೀಡಿದ ದೂರಿನಂತೆ ಜಯಕರ, ರತ್ನಾಕರ, ಅಬೂಬಕ್ಕರ್, ಆಸೀಫ್, ಇತರ ಮೂವರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.