ಉಳ್ಳಾಲ, ಫೆ.21 (DaijiworldNews/AA): ಹಲವು ಅಧಿಕಾರಿಗಳು ಗ್ರಾಮಸಭೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸಭೆಯನ್ನೇ ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ರದ್ದುಪಡಿಸಿದ ಪ್ರಸಂಗ ನಡೆದಿದೆ.

ಪಜೀರು ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಗುರುವಾರ ಹಮ್ಮಿಕೊಳ್ಳಲಾಗಿತ್ತು. 10.30ಕ್ಕೆ ಸಭೆ ನಿಗದಿಯಾಗಿತ್ತಾದರೂ ಅಧಿಕಾರಿಗಳು ಬಂದಿರಲಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಮೇಲ್ವಿಚಾರಕಿ ಮುಬೀನಾ ನೋಡೆಲ್ ಅಧಿಕಾರಿಯಾಗಿ ಆಗಮಿಸಿ ಅಧಿಕಾರಿಗಳನ್ನು ಕಾದರು. ಬಳಿಕ ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯಿಂದ ಪ್ರತಿನಿಧಿಗಳು ಆಗಮಿಸಿದ್ದರು. ಗ್ರಾಮಸ್ಥರೂ ಬಂದು ಅಧಿಕಾರಿಗಳನ್ನು ಕಾಯತೊಡಗಿದರು.
ಸಾರಿಗೆ, ಪೊಲೀಸ್, ಮೆಸ್ಕಾಂ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಕಂದಾಯ, ಜಲಜೀವನ್ ಇಲಾಖೆ ಮುಂತಾದ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಯಲ್ಲಿ ಮುಖ್ಯವಾಗಿ ಹಾಜರಿರಬೇಕಿದ್ದರೂ ಇವರ ಪತ್ತೆ ಇರಲಿಲ್ಲ. ಒಂದು ಗಂಟೆ ಕಾದರೂ ಅವರ ಬರುವಿಕೆಯ ಸುಳಿವು ಸಿಗಲಿಲ್ಲ. ಇದರಿಂದ ಆಕ್ರೋಶಿತರಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಧಿಕಾರಿಗಳ ಬೇಜವಾಬ್ದಾರಿತನವನ್ನು ವಿರೋಧಿಸಿ ಸಭೆಯನ್ನು ರದ್ದುಗೊಳಿಸಿ, ಮುಂದೂಡಿದರು.
ಅಧ್ಯಕ್ಷ ಕೆ. ಮಹಮ್ಮದ್ ರಫೀಕ್ ಮಾತನಾಡಿ, ಜನಪ್ರತಿನಿಧಿಗಳನ್ನು ನಿತ್ಯ ಗ್ರಾಮಸ್ಥರು ಭೇಟಿಯಾಗುತ್ತಾರೆ. ಆದರೆ ಅಧಿಕಾರಿಗಳನ್ನು ಗ್ರಾಮಸಭೆಗಳಲ್ಲಷ್ಟೇ ಭೇಟಿಯಾಗಬೇಕಿದೆ. ಅಲ್ಲದ ಹೊಸ ಯೋಜನೆಗಳ ಪರಿಚಯವೂ ಅವರಿಂದಲೇ ಆಗಬೇಕಿದೆ. ಆದರೆ 15 ಅಧಿಕಾರಿಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೀಡಿದ ದಿನಾಂಕದಂತೆ ಗ್ರಾಮಸಭೆಯನ್ನು ಆಯೋಜಿಸಿ, ನೋಟೀಸಿನ ಮುಖೇನ ಆಹ್ವಾನಿಸಿ ಅವರಿಂದ ಸಭೆಗೆ ಹಾಜರಾಗುವ ಪತ್ರವನ್ನು ದಾಖಲೀಕರಿಸಿ ನಂಬಿ ಸಭೆ ನಡೆಸಿದರೂ, ಕೇವಲ 5 ಅಧಿಕಾರಿಗಳಷ್ಟೇ ಭಾಗಿಯಾಗಿದ್ದಾರೆ. ಈ ಕಾರಣದಿಂದಾಗಿ ಗ್ರಾಮದ ಅಭಿವೃದ್ಧಿಯೂ ಸಾಧ್ಯವಿಲ್ಲ, ಗ್ರಾಮಸ್ಥರ ಸಮಸ್ಯೆಗಳಿಗೂ ಪರಿಹಾರ ದೊರೆಯುವುದಿಲ್ಲ ಅನ್ನುವ ಕಾರಣದೊಂದಿಗೆ ಇಡೀ ಗ್ರಾಮಸಭೆಯನ್ನೇ ರದ್ದುಗೊಳಿಸಿದ್ದೇವೆ ಎಂದರು.