ಮಂಗಳೂರು, ಫೆ.21(DaijiworldNews/TA): ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಅತ್ಯಾಕರ್ಷಕ ಕನ್ನಡ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.






ಅಸೈಗೋಳಿಯ ಕೇಂದ್ರ ಮೈದಾನದಿಂದ ಶುಕ್ರವಾರ ಬೆಳಗ್ಗೆ ಆರಂಭಗೊಂಡ ವೈಭವದ ಸಾಂಸ್ಕೃತಿಕ ಮೆರವಣಿಗೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ಚಾಲನೆ ನೀಡಿದರು. ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಗುರುದತ್ತ್ ಎಂ.ಎನ್. ಭುವನೇಶ್ವರಿಗೆ ಪುಪ್ಪಾರ್ಚನೆ ಸಲ್ಲಿಸಿದರು. ಅಸೈಗೋಳಿ ಮೈದಾನದಿಂದ ಉದ್ಘಾಟನೆಗೊಂಡು ಮಂಗಳೂರು ವಿವಿ ಮಾರ್ಗದ ಮೂಲಕ ಸಾಗಿದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳೊಂದಿಗೆ ಕೀಲು ಕುದುರೆ, ಕೋಲಾಟ, ಸುಗ್ಗಿ ಕುಣಿತ, ಕಂಗೀಲು, ಯಕ್ಷಗಾನ, ಪೂಜಾ ಕುಣಿತ, ಡೊಳ್ಳು ಕುಣಿತ ಶಾಲಾ ಮಕ್ಕಳಿಂದ ಜಾನಪದ ನೃತ್ಯಗಳು, ಕುಣಿತ ಭಜನೆ, ಚೆಂಡೆ, ಡೋಲು-ಕೋಲು ಕುಣಿತ, ಕಂಸಾಲೆ, ಗೊಂಬೆ ಕುಣಿತ ಮೊದಲಾದ ತಂಡಗಳು ಮೆರವಣಿಗೆಗೆ ರಂಗು ತುಂಬಿದವು.
ಮೆರವಣಿಗೆಯು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣ ದ ವರೆಗೂ ಸಾಗಿ ಬಂದಿತು. ಸಭಾಂಗಣದ ಬಳಿ ಕೊಣಾಜೆ ಗ್ರಾ.ಪಂ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣಗೈದರು. ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.