ಉಡುಪಿ, ಫೆ.21(DaijiworldNews/TA): ಗಾಯಗೊಂಡು ರಸ್ತೆ ಬದಿಯಲ್ಲಿ ಎರಡು ದಿನಗಳಿಂದ ಅಸಹಾಯಕವಾಗಿ ಬಿದ್ದಿದ್ದ ಕೂಲಿ ಕಾರ್ಮಿಕನನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಮಾರ್ಪಡಿಯ ಒಂತಿಕಟ್ಟೆಯಲ್ಲಿ ನಡಿದಿದೆ.

ಎರಡು ದಿನಗಳ ಹಿಂದೆ ಪಾದಚಾರಿಯೊಬ್ಬರಿಗೆ ಬೈಕ್ ಬಡಿದು ಗಾಯಗೊಂಡ ವ್ಯಕ್ತಿ ರಸ್ತೆ ಬದಿಯಲ್ಲಿ ಬಿದ್ದಿದ್ದರು. ಏಳಲಾಗದೆ ಅಸಹಾಯಕರಾಗಿದ್ದರು. ಈತ ನರಳಾಡುತ್ತಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಈ ವ್ಯಕ್ತಿ ನಾರಾಯಣ ಮೊಗೇರ(58) ಎಂದು ಗೊತ್ತಾಗಿದೆ. ಇವರು ಮೂಲತಃ ಮೂಡಬಿದ್ರೆಯ ನಿವಾಸಿಯಾಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ.
ರಸ್ತೆ ದಾಟುವಾಗ ಬೈಕ್ ಬಡಿದು ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಗಾಯಗೊಂಡು ನೆರವಿಗೆ ಯಾರೂ ಸ್ಪಂದಿಸದ ಕಾರಣ 2 ದಿನ ರಸ್ತೆ ಬದಿಯ ಮರದಡಿಯಲ್ಲಿ ಕಾಲ ಕಳೆದಿದ್ದಾರೆ. ಈ ಬಗ್ಗೆ ರೈಲ್ವೆ ಉದ್ಯೋಗಿ ಸದಾನಂದರಿಂದ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಉಡುಪಿಯಿಂದ ಆಂಬುಲೆನ್ಸ್ ನೊಂದಿಗೆ ತೆರಳಿ ಗಾಯಾಳುವನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಗೆ ಮಾಹಿತಿ ನೀಡಲಾಗಿದೆ.