ಉಡುಪಿ, ಫೆ.24 (DaijiworldNews/AA): ಮನೆಯ ತ್ಯಾಜ್ಯವನ್ನು ಬೀದಿಗಳಲ್ಲಿ ಎಸೆಯುವ ಬದಲು ಕಾಂಪೋಸ್ಟ್ ಮಾಡುವ ಮೂಲಕ ತೋಟಗಳ ಫಲವತ್ತತೆಯನ್ನು ಹೆಚ್ಚಿಸಬಹುದು ಮತ್ತು ರಸ್ತೆ ಬದಿಯಲ್ಲಿ ತ್ಯಾಜ್ಯ ಸಂಗ್ರಹವಾಗುವುದನ್ನು ತಡೆಯಬಹುದು. ಇದರಿಂದ ಪರಿಸರವನ್ನು ಸ್ವಚ್ಛವಾಗಿಡಬಹುದು ಎಂದು ತೆಂಕನಿಡಿಯೂರು ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ದಯಾನಂದ್ ತಿಳಿಸಿದರು.



ಈ ಕಾರ್ಯಕ್ರಮವು ಭಾನುವಾರ ತೊಟ್ಟಂನ ಸಂತ ಅನ್ನಮ್ಮ ಚರ್ಚ್ ಸಭಾಂಗಣದಲ್ಲಿ ಚರ್ಚ್ನ ಪರಿಸರ ಆಯೋಗ, ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಹಾಗೂ ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಮ ಪಂಚಾಯತ್ಗಳ ಸಹಯೋಗದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ದಯಾನಂದ್ ಅವರು, ಜನರು ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ, ಇಡೀ ಪರಿಸರ ವ್ಯವಸ್ಥೆಯು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮರಗಳನ್ನು ನೆಡುವುದರಿಂದ ಹೆಚ್ಚುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಪರಿಸರವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದಾನೆ ಎಂದರು.
ತೊಟ್ಟಂನ ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ಫಾದರ್ ಡೆನಿಸ್ ಡಿ'ಸಾ ಮಾತನಾಡಿ, ಹವಾಮಾನ ಬದಲಾವಣೆಗೆ ಪರಿಸರ ಅಸಮತೋಲನವೇ ಮುಖ್ಯ ಕಾರಣ. ಪರಿಹಾರ ಕಂಡುಕೊಳ್ಳಲು ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಗಾಳಿ, ನೀರು, ಮಣ್ಣು ಮತ್ತು ಮರಗಳು ಅಮೂಲ್ಯವಾದ ಸಂಪನ್ಮೂಲಗಳು, ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸಬೇಕು. ಪರಿಸರವನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂನ ಅಧ್ಯಕ್ಷ ರಮೇಶ್ ತಿಂಗಳಯ ಮಾತನಾಡಿ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಅಗತ್ಯವಿದೆ. ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದ ಹೆಚ್ಚುತ್ತಿರುವ ಸಮಸ್ಯೆಯನ್ನು ತಡೆಗಟ್ಟಲು ಪಂಚಾಯತ್ಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು ಮತ್ತು ನಾಗರಿಕರು ಯದ್ವಾತದ್ವಾ ತ್ಯಾಜ್ಯ ವಿಲೇವಾರಿ ಮಾಡುವುದನ್ನು ನಿಲ್ಲಿಸುವಂತೆ ಕಿವಿ ಮಾತು ಹೇಳಿದರು.
ಪ್ರೊಫೆಸರ್ ಸ್ಟೀವನ್ ಕ್ವಾಡ್ರೋಸ್ ಪೆರ್ಮುಡೆ ಪರಿಸರ ಅವನತಿಯ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಭಾಗವಾಗಿ, ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಮ ಪಂಚಾಯತ್ ಪ್ರದೇಶದ ನೈರ್ಮಲ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ. ನಾಯಕ್, ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ ಆಚಾರ್ಯ, ಪಂಚಾಯತ್ ಕಾರ್ಯದರ್ಶಿ ಗುರುರಾಜ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಷ್ಮಾ, ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂನ ಉಪಾಧ್ಯಕ್ಷ ಶಬ್ಬೀರ್ ಸಾಹೇಬ್ ಮತ್ತು ಪ್ರಖ್ಯಾತ್ ಶೆಟ್ಟಿ, ಶರತ್ ಶೆಟ್ಟಿ, ಮೀನಾ ಪಿಂಟೋ ಮತ್ತು ಯಾದವ್ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂನ ಕಾರ್ಯದರ್ಶಿ ಲೆಸ್ಲಿ ಅರೋಜಾ ಸ್ವಾಗತ ಭಾಷಣ ಮಾಡಿದರು. ಪರಿಸರ ಆಯೋಗದ ನಿರ್ದೇಶಕ ಜೋಸೆಫ್ ಪಿಂಟೋ ವಂದನಾರ್ಪಣೆ ಸಲ್ಲಿಸಿದರು. ಲವಿನಾ ಎ. ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.