ಉಡುಪಿ, ಫೆ.25 (DaijiworldNews/AK):ಚಿತ್ರಹಿಂಸೆ ಮತ್ತು ಶೋಷಣೆಗೆ ಒಳಗಾಗಿ ಓಮನ್ನಿಂದ ಪರಾರಿಯಾಗಿದ್ದ ತಮಿಳುನಾಡಿನ ಮೂವರು ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ಓಮಾನ್ ಮೂಲದ ಮೀನುಗಾರಿಕಾ ದೋಣಿ ಮಲ್ಪೆ ಸೇಂಟ್ ಮೇರಿಸ್ ದ್ವೀಪದ ಬಳಿ ಪತ್ತೆಯಾಗಿದೆ.


ಓಮಾನ್ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೀನುಗಾರರಿಗೆ ಕೂಲಿ, ಆಹಾರ ಕೊಡದೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಕೋಸ್ಟ್ ಗಾರ್ಡ್ ಪ್ರಕಾರ, ಬೋಟ್ ಮಾಲೀಕರು ತಮ್ಮ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಂಡು ಚಿತ್ರಹಿಂಸೆಗೆ ಒಳಗಾದ ನಂತರ ಮೀನುಗಾರರು ಪ್ರಾಣಭಯದಿಂದ ಓಮನ್ ಬಂದರಿನಿಂದ ತಪ್ಪಿಸಿಕೊಂಡು ಬಂದಿದ್ದಾರೆ ತಿಳಿದುಬಂದಿದೆ.
ಮೀನುಗಾರರು ಸಮುದ್ರದ ಮೂಲಕ ಸುಮಾರು 4,000 ಕಿ.ಮೀ ಪ್ರಯಾಣಿಸಿ ಭಾರತದ ಕರಾವಳಿಯನ್ನು ತಲುಪಿದ್ದಾರೆ ಎಂದು ವರದಿಯಾಗಿದೆ. ಕಾರವಾರ ಮಾರ್ಗವಾಗಿ ಮಲ್ಪೆ ಕಡೆಗೆ ತೆರಳುತ್ತಿದ್ದ ವಿದೇಶಿ ಹಡಗಿನಲ್ಲಿ ಡೀಸೆಲ್ ಖಾಲಿಯಾಗಿ ಮೀನುಗಾರರು ಆಹಾರ, ಹಣವಿಲ್ಲದೆ ಪರದಾಡುವಂತಾಯಿತು. ಮಲ್ಪೆ ಸೇಂಟ್ ಮೇರಿಸ್ ದ್ವೀಪದ ಬಳಿ ಸ್ಥಳೀಯ ಮೀನುಗಾರರು ಹಡಗನ್ನು ಗಮನಿಸಿ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ.
ಕರಾವಳಿ ರಕ್ಷಣಾ ಪಡೆ ದೋಣಿಯನ್ನು ವಶಪಡಿಸಿಕೊಂಡು ಮೀನುಗಾರರನ್ನು ವಶಕ್ಕೆ ಪಡೆದಿದೆ. ದಾಖಲೆಗಳಿಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.