ಮಂಗಳೂರು, ಫೆ.26(DaijiworldNews/TA): 2017ರಲ್ಲಿ ಮಂಗಳೂರು ಮೇಯರ್ ಆಗಿದ್ದ ಸಂದರ್ಭದಲ್ಲಿ ಕೂಡ ಸಬ್ ಜೈಲಿನೊಳಗೆ ಇದೇ ರೀತಿ ರಸ್ತೆಯಿಂದ ಪೊಟ್ಟಣವನ್ನು ಎಸೆದ ಘಟನೆ ನಡೆದಿತ್ತು. ಆ ವೇಳೆ ಕೂಡ ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಆದರೆ ಆ ಸಮಯದಲ್ಲಿ ಅಲ್ಲಿನ ಅಧಿಕಾರಿಗಳು ನಿರ್ಲ್ಯಕ್ಷ್ಯ ಮಾಡಿದ್ದರು ಎಂದು ಮಾಜಿ ಮೇಯರ್, ಬಿಜೆಪಿ ನಾಯಕಿ ಕವಿತಾ ಸನಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಸಬ್ ಜೈಲಿನೊಳಗೆ ನಿಷೇಧಿತ ವಸ್ತು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಗಳೂರಿಗೆ ಒಳ್ಳೆಯ ಹೆಸರಿದ್ದು, ಉತ್ತಮ ರೀತಿಯ ವಿದ್ಯಾಭ್ಯಾಸವನ್ನು ಜಿಲ್ಲೆಯಲ್ಲಿ ನೀಡಲಾಗುತ್ತದೆ. ಹಾಗಾಗಿ ರಾಜ್ಯವಲ್ಲದೆ ಹೊರರಾಜ್ಯಗಳ ವಿದ್ಯಾರ್ಥಿಗಳು ಕೂಡ ವಿದ್ಯಾರ್ಜನೆಗೆ ಇಲ್ಲಿಗೆ ಬರುತ್ತಾರೆ. ಜೈಲಿನೊಳಗೆ ಸೂಕ್ತ ರೀತಿಯ ಕೋ ಆರ್ಡಿನೇಶನ್ ಇಲ್ಲದೆ ಈ ರೀತಿಯ ಕೆಲಸ ನಡೆಯಲು ಸಾಧ್ಯವಿಲ್ಲ.
ಈ ರೀತಿಯ ಘಟನೆಗಳಿಂದ ಜಿಲ್ಲೆಗೆ ಕೆಟ್ಟ ಹೆಸರು ಕೂಡ ಬರುತ್ತಿದೆ. ಪೊಲೀಸ್ ಇಲಾಖೆಗೆ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನೇ ಕಟ್ಟಿ ಹಾಕಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ತಿಳಿಸಿದರು.