ಮಂಗಳೂರು, ಫೆ.26(DaijiworldNews/TA): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಇಲಾಖೆಗೆ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ ಎಂಬುದು ಗೊತ್ತಾಗಿದೆ. ಮೈಸೂರಿನಲ್ಲಿ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಒಂದು ಧರ್ಮಕ್ಕೆ ಸೀಮಿತವಾದ ರೀತಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ದ.ಕ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಮಂಗಳೂರಿನ ಸಬ್ ಜೈಲಿನೊಳಗೆ ಇಬ್ಬರು ಯುವಕರು ಪೊಟ್ಟಣ ಎಸೆದ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಪೊಟ್ಟಣ ಬಿಸಾಡಿದವರು ಯಾರು? ಪೊಟ್ಟಣದಲ್ಲಿ ಯಾವ ವಸ್ತು ಇತ್ತು? ಅದರ ಯೋಜನೆ ಹೇಗೆ ರೂಪಿಸಲಾಗಿತ್ತು ಎಂಬುದರ ಬಗ್ಗೆ ಹಲವು ಸಂಶಯಗಳಿವೆ. ಪೊಟ್ಟಣದಲ್ಲಿ ಚಹಾ ಪುಡಿ ಎಂದು ಜೈಲರ್ ಮಾಹಿತಿ ನೀಡುತ್ತಾರೆ.
ಜೈಲಿನಲ್ಲಿರುವ ಅಪರಾಧಿಗಳಿಗೆ ಕನಿಷ್ಠ ಚಹಾ ಕೊಡುವ ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಭಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೆಂಗಳೂರು, ಹೊನ್ನಾವರದಲ್ಲಿ ಗೋವಿನ ಮೇಲೆ ನಿರಂತರವಾಗಿ ದಾಳಿ ನಡೆದರೆ ಉಳ್ಳಾಲದ ಕೋಟೆಕಾರ್ ನಲ್ಲಿ ಬ್ಯಾಂಕ್ ದರೋಡೆಯಾಗಿದೆ. ಇದನ್ನು ನೋಡುವಾಗ ಹಿಂದಿನ ಬಿಹಾರದಲ್ಲಿದ್ದ ಪರಿಸ್ಥಿತಿ ಸದ್ಯ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.