ಮಂಗಳೂರು, ಮಾ,01 (DaijiworldNews/AK):ತಾಪಮಾನ ತೀವ್ರ ಏರಿಕೆ ಕಾರಣದಿಂದಾಗಿ ಹವಾಮಾನ ಇಲಾಖೆಯು ಕರಾವಳಿಗೆ ಬಿಸಿ ಗಾಳಿಯ ಎಚ್ಚರಿಕೆ ನೀಡಿದೆ. ಜಿಲ್ಲೆಯಲ್ಲಿ 40 ಡಿ.ಸೆ.ವರೆಗೆ ತಾಪಮಾನ ದಾಖಲಾಗಿದ್ದು, ಇದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಇನ್ನೂ ಕೆಲವು ದಿನ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ತಿಮ್ಮಯ್ಯ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಮನುಷ್ಯನ ದೇಹದ ಉಷ್ಣತೆಯು ಸಾಮಾನ್ಯವಾಗಿ 97.5- 98.9 ಫ್ಯಾರನ್ ಹೀಟ್ ವರೆಗೆ ಇರುತ್ತದೆ. ಒಳಾಂಗಣ ಅಥವಾ ಹೊರಾಂಗಣ ಪ್ರದೇಶದಲ್ಲಿ ಹೆಚ್ಚಿನ ಉಷ್ಣತೆಯಿಂದ ಹಾಗೂ ಉಷ್ಣತೆಯ ಒತ್ತಡದಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು, ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತದೆ. ತಲೆ ಸುತ್ತುವುದು, ಪ್ರಜ್ಞೆ ತಪ್ಪುವುದು, ವಾಕರಿಕೆ, ವಾಂತಿ, ತಲೆನೋವು, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಮತ್ತು ಹಳದಿ ಬಣ್ಣಕ್ಕೆ ತಿರುಗುವುದು, ಏರುಗತಿಯ ಉಸಿರಾಟ ಹಾಗೂ ಹೃದಯ ಬಡಿತ ಹೆಚ್ಚಳ ಮೊದಲಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು 108/102ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದರು.
ಆರೋಗ್ಯ ಕೇಂದ್ರ ಮಟ್ಟದಲ್ಲಿ ಅರಿವು:
ಬಿಸಿ ಗಾಳಿ ಎಚ್ಚರಿಕೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಈಗಾಗಲೇ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಹಾಗೂ ಸಿಬಂದಿಗೆ ಅರಿವು ಮೂಡಿಸಲಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಮಾಹಿತಿ ನೀಡುವಂತೆ ಹಾಗೂ ಯಾವುದಾದರೂ ಪ್ರಕರಣ ವರದಿಯಾದರೆ ಕೂಡಲೇ ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಲಾಗಿದೆ.