ಮಂಗಳೂರು, ಮಾ.01(DaijiworldNews/TA): ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿ ಜಂಕ್ಷನ್ ನ ಅಂಗಡಿಯೊಂದರಿಂದ ನಗದು ಹಾಗೂ ಸಾಮಗ್ರಿಗಳನ್ನು ಕಳ್ಳತನಗೈದ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ತೌಡುಗೋಳಿಯ ವಸಂತ ಮಲಿ ಮಾಲಕತ್ವದ ಅಂಗಡಿಗೆ ಸುಮಾರು ಎರಡೂವರೆ ಗಂಟೆ ರಾತ್ರಿ ರಾಡ್ ಸಮೇತ ನುಗ್ಗಿದ ಕಳ್ಳ ಹೊರಗಡೆಯ ಕಬ್ಬಿಣದ ಬಾಗಿಲಿಗೆ ಒಳಗೂ ಹೊರಗೂ ಹಾಕಿದ್ದ ಬೀಗವನ್ನು ಮುರಿದು ಒಳ ನುಗ್ಗಿದ್ದಾನೆ. ಅಲ್ಲಿಂದ ಕ್ಯಾಶ್ ಕೌಂಟರ್ ಇರುವ ಕೊಠಡಿಯ ಮರದ ಬಾಗಿಲಿನ ಬೀಗ ಮುರಿಯಲು ಸುಮಾರು ಅರ್ಧ ಗಂಟೆ ಒದ್ದಾಡಿದ್ದು ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿದೆ.
ಸುಮಾರು ಹತ್ತು ಸಾವಿರ ನಗದು ಹಾಗೂ ಹದಿನೈದು ಸಾವಿರ ಮೊತ್ತದ ಸಿಗರೇಟ್ ಬಂಡಲ್, ಮಧು ಪಾನ್ ಪರಾಗ್ ಸೇರಿದಂತೆ ಟೀ ಪೌಡರ್, ಆಹಾರ ಸಾಮಗ್ರಿಗಳು ಸೇರಿದಂತೆ ಸುಮಾರು ನಲ್ವತ್ತು ಸಾವಿರ ರೂ. ಮೌಲ್ಯದ ಸಾಮಗ್ರಿ ಚೀಲವೊಂದರಲ್ಲಿ ತುಂಬಿಸಿ ಕೊಂಡೊಯ್ದಿದ್ದಾನೆ. ಕಳ್ಳ ಅಂಗಡಿಗೆ ಬಂದ ಬಳಿಕ ಹಾಕಿದ್ದ ಟಿ ಶರ್ಟ್ ಅನ್ನು ಕಳಚಿದ್ದು ಕ್ಯಾಶ್ ಕೌಂಟರ್ ಗೆ ಒಳನುಗ್ಗುತ್ತಿದ್ದಂತೆಯೇ ಮುಖಕ್ಕೆ ಟೀ ಶರ್ಟ್ ಅನ್ನು ಕಟ್ಟಿಕೊಂಡಿದ್ದಾನೆ. ಪಕ್ಕದಲ್ಲಿದ್ದ ವೈಫೈ ಸಿಸ್ಟನ್ ಕದ್ದೊಯ್ದಿದ್ದು ಸಿಸಿಟಿಯ ಹಾರ್ಡ್ ಡಿಸ್ಕ್ ಎಂದು ಭಾವಿಸಿ ಕದ್ದಿರುವ ಶಂಕೆ ಇದೆ.
ಒಟ್ಟಿನಲ್ಲಿ ಅಂದಾಜು ಸುಮಾರು 40ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದೊಯ್ದಿದ್ದಾನೆ. ಅಂಗಡಿಯ ಮಾಲೀಕರು ಕೆಲವೊಮ್ಮೆ ಅಂಗಡಿ ಕೋಣೆಯಲ್ಲೇ ಮಲಗುತ್ತಿದ್ದು ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದ ಕಾರಣ ಪಕ್ಕದಲ್ಲೇ ಇರುವ ಮನೆಯಲ್ಲಿ ಮಲಗಿದ್ದರು. ಕೊಣಾಜೆ ಪೊಲೀಸರು ಪರಿಶೀಲಿಸಿದ್ದು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.