ಕುಂದಾಪುರ, ಮಾ.02 (DaijiworldNews/AA): ಫೆರ್ರಿ ರಸ್ತೆಯಲ್ಲಿ ಅರ್ಜಿ ಕೇಂದ್ರ ನಡೆಸುತ್ತಿರುವ ಕೋಡಿ ನಾಗೇಶ್ ಎಂಬುವರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿಯಾಗಿ ತಯಾರಿಸುವ ದಸ್ತಾವೇಜಿಗೆ ಸ್ಟಾಂಪ್ ಹಾಕಿ, ಸರ್ಕಾರಿ ಅಧಿಕಾರಿಗಳ ನಕಲಿ ಸಹಿ ಹಾಗೂ ಸೀಲು ಬಳಸಿ ವಂಚಿಸುತ್ತಿರುವ ಕುರಿತು ಬಂದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಕುಂದಾಪುರ ಎಸ್ಐ ನಂಜಾ ನಾಯ್ಕ ಹಾಗೂ ಸಿಬ್ಬಂದಿ ನ್ಯಾಯಾಲಯದ ಅನುಮತಿ ಪಡೆದು ಅರ್ಜಿ ಕೇಂದ್ರಕ್ಕೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಬೈಂದೂರು ಮುದ್ರಣಾಧಿಕಾರಿಗಳ ಸೀಲು, ಕುಂದಾಪುರ ಆಸ್ಪತ್ರೆಯ ಜನನ-ಮರಣ ಉಪನೋಂದಣಾಧಿಕಾರಿಗಳ ಸೀಲು, ಬೀಜಾಡಿ ಗ್ರಾ.ಪಂ.ನ ಸೀಲು, ಜಿಲ್ಲಾಧಿಕಾರಿಗಳ ಕಚೇರಿಯ ಸೀಲು, ಕುಂದಾಪುರದ ಮದುವೆ ನೋಂದಣಾಧಿಕಾರಿಯ ಸೀಲು, ನಗರಸಭೆಯ ಜನನ-ಮರಣ ನೋಂದಣಾಧಿಕಾರಿಯ ಸೀಲು, ಕುಂದಾಪುರ ತಹಶೀಲ್ದಾರ್ ಸೀಲು, ಬನ್ನೂರು ಗ್ರಾ.ಪಂ. ಅಧ್ಯಕ್ಷರ ಸೀಲು, ನಾವುಂದ ಶಾಲಾ ಮುಖ್ಯೋಪಾಧ್ಯಾಯರ ಸೀಲು, ಮುದೂರಿನ ಭಾರತ್ ಮಾತಾ ಪ್ರೌಢಶಾಲೆಯ ಸೀಲು, ಗೋಪಾಡಿ ಪಿಡಿಒ ಸೀಲು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸೀಲು, ಬೈಂದೂರು ಉಪನೋಂದಣಾಧಿಕಾರಿ ಸೀಲು, ಶಿಕ್ಷಣ ಭಾರತಿ ಸಹಕಾರಿಯ ಅಧ್ಯಕ್ಷರ ಸೀಲು, ಉಡುಪಿ ಉಪತಹಶೀಲ್ದಾರರ ಸೀಲು, ಕುಂದಾಪುರ ತಾಲೂಕು ಭೂಮಾಪಕರ ಸೀಲು, ಮದುವೆ ಅಧಿಕಾರಿಯ ಸೀಲು, ಬಸೂರು ಗ್ರಾ.ಪಂ.ನ ಸೀಲುಗಳು ಹಾಗೂ ದಿನ, ತಿಂಗಳು, ವರ್ಷ ಇರುವ ರಬ್ಬರ್ ಸ್ಟಾಂಪ್ವೊಂದು ಪತ್ತೆಯಾಗಿದೆ. ಅವುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಕೋಡಿ ನಾಗೇಶ್ ಈ ನಕಲಿ ಸರ್ಕಾರಿ ಸ್ಟಾಂಪ್ಗಳನ್ನು ಬಳಸಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಮೂಲಕ ನಕಲಿ ಅಧಿಕೃತ ದಾಖಲೆಗಳು ಮತ್ತು ಸಹಿಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಸ್ವಾಧೀನ ಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.