ಉಳ್ಳಾಲ, ಮಾ.03 (DaijiworldNews/AA): ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿ ಜಂಕ್ಷನ್ನಲ್ಲಿರುವ ಅಂಗಡಿಯೊಂದರಲ್ಲಿ ನಗದು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಕಳ್ಳತನದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತೌಡುಗೋಳಿಯ ವಸಂತ ಅವರ ಮಾಲೀಕತ್ವದ ಅಂಗಡಿಗೆ ಕನ್ನ ಹಾಕಲು ಮುಂಜಾನೆ 2.30 ರ ಸುಮಾರಿಗೆ ರಾಡ್ ಸಮೇತ ಆಗಮಿಸಿದ್ದಾನೆ. ಬಳಿಕ ಕಳ್ಳನು ಹೊರಗಡೆಯ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಅಂಗಡಿ ಒಳಗೆ ಪ್ರವೇಶಿಸಿದ್ದಾನೆ.
ಬಳಿಕ ಅಲ್ಲಿಂದ ಕ್ಯಾಶ್ ಕೌಂಟರ್ ಇರುವ ಕೊಠಡಿಯ ಮರದ ಬಾಗಿಲಿನ ಬೀಗ ಮುರಿಯಲು ಸುಮಾರು ಅರ್ಧ ಗಂಟೆ ಒದ್ದಾಡಿದ್ದಾನೆ, ನಂತರ ಬಾಗಿಲ ಬೀಗ ಮುರಿದ ಆತ ಸುಮಾರು 10,000 ರೂ. ಮತ್ತು ಹಾಗೂ 15,000 ರೂ.ಮೊತ್ತದ ಸಾಮಗ್ರಿಗಳನ್ನು ಕದ್ದೊಯ್ದಿದ್ದಾನೆ.
ಕಳ್ಳತನದ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳನು ಸಿಸಿಟಿವಿಯ ಹಾರ್ಡ್ಡಿಸ್ಕ್ ಎಂದು ಇಂಟರ್ನೆಟ್ನ ಮೊಡೆಮ್ ಅನ್ನು ಹೊತ್ತೂಯ್ದಿದ್ದಾನೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.