ಬಂಟ್ವಾಳ ,ನವದೆಹಲಿ, ಮಾ.05(DaijiworldNews/AK): ಐತಿಹಾಸಿಕ ಹಿನ್ನೆಲೆಯ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 105 ವರ್ಷಗಳ ಬಳಿಕ ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಾನಿಧ್ಯ ವೃದ್ಧಿಗಾಗಿ ಬುಧವಾರ ಶತಚಂಡಿಕಾಯಾಗ ನಡೆಯಲಿದ್ದು, ಸಕಲ ಸಿದ್ಧತೆ ನಡೆದಿದೆ.

ಇದರ ಪ್ರಯುಕ್ತ ಕಳೆದ ಶನಿವಾರದಿಂದಲೇ ಬ್ರಹ್ಮಶ್ರೀ ವೇ.ಮೂ.ಪೊಳಲಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳು ಆರಂಭಗೊಂಡಿದ್ದು, ಭಾನುವಾರ ಶ್ರೀಚಕ್ರಪೂಜೆ, ಸೋಮವಾರ ಪಾರಾಯಣ, ನವಾಕ್ಷರೀ ಜಪ, ನವಗ್ರಹ ಹೋಮ ನಡೆದಿದೆ. ಮಾ.5 ರಂದು ಬೆಳಿಗ್ಗೆ 6 ರಿಂದ ಚಂಡಿಕಾಯಾಗ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿಯಾಗಲಿದೆ. ಬಳಿಕ ಶ್ರೀದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ.
ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಈ ಸಂದರ್ಭ ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ.
ಮಾ.6 ರಂದು ಸೇವಾ ರೂಪದ ದೊಡ್ಡ ರಂಗಪೂಜೆ ಉತ್ಸವ ನಡೆಯಲಿದೆ. ಅಂದು ರಾತ್ರಿ ವಿಶೇಷವಾಗಿ ದೇವರ ಬಲಿ ಉತ್ಸವ, ಬೆಳ್ಳಿರಥೋತ್ಸವ, ಚಂದ್ರಮಂಡಲ ರಥ, ಸಣ್ಣರಥೋತ್ಸವ, ಪಲ್ಲಕಿ ಉತ್ಸವ ನಡೆಯಲಿದೆ. ಈಗಾಗಲೇ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಭಗವದ್ದಕ್ತರು ಕ್ಷೇತ್ರಕ್ಕಾಗಮಿಸಿ ಹೋಮ ಹವನಾದಿ,
ಪಾರಾಯಣವನ್ನು ಕಣ್ಣುಂಬಿಕೊಂಡಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ಉಳಿಪಾಡಿ, ದೇವಳದ ಆಡಳಿತ ಮೊತ್ತೇಸರರಾದ ಡಾ.ಮಂಜಯ್ಯ ಶೆಟ್ಟಿ ಅವರ ಸಾರಥ್ಯದಲ್ಲಿ ವಿವಿಧ ಉಪನಮಿತಿಗಳು, ಸಂಘಸಂಸ್ಥೆಗಳು, ಸ್ವಯಂಸೇವಕರು ಸಕಲ ವ್ಯವಸ್ಥೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಈಗಾಗಲೇ ಸಾವಿರ ಸೀಮೆಯ ಭಕ್ತರಿಂದ ಹೊರಕಾಣೆಕೆ ಹರಿದುಬಂದಿದೆ.
2019 ರಲ್ಲಿ ಕ್ಷೇತ್ರದಲ್ಲಾದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಸ್ವಯಂಸೇವಕರ ವಿವಿಧ ತಂಡಗಳು ಮಾಡಿರುವ ನಿಸ್ವಾರ್ಥ ಸೇವೆ ಮಾದರಿಯಾಗಿತ್ತು. ಅಭೂತಪೂರ್ವವಾದ ಯಶಸ್ಸನ್ನು ಕಂಡಿತ್ತು. ಅದೇ ರೀತಿಯಲ್ಲಿ ಶತಚಂಡಿಕಾಯಾಗ, ದೊಡ್ಡ ರಂಗಪೂಜೆ ಉತ್ಸವವನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ. ಅನ್ನದಾನ ಸೇವೆ ಕೂಡ ಆರಂಭವಾಗಿದ್ದು, ಭಕ್ತರು ಸೆಕೆಯಿಂದ ಮುಕ್ತಿ ಕಾಣಲು ಮತ್ತು ಸಾವಕಾಶವಾಗಿ ದೇವರ ಅನ್ನಪ್ರಸಾದ ಸ್ವೀಕರಿಬೇಕು ಎಂಬ ನಿಟ್ಟಿನಲ್ಲಿ ಈ ಸ್ಥಳವನ್ನು ಜರ್ಮನ್ ಟೆಂಟ್ ಅಳವಡಿಸಿ ತಂಪಾದ ಗಾಳಿಗಾಗಿ ಎರೋಪ್ಲಾನ್ ಪ್ಯಾನ್ ಅಳವಡಿಸಲಾಗಿದೆ. ಅನ್ನದಾನ ಸ್ಥಳದಲ್ಲಿ ಬಡಿಸುವುದರಿಂದ ಹಿಡಿದು ಎಲ್ಲಾ ವ್ಯವಸ್ಥೆಯನ್ನುಸ್ವಯಂಸೇವಕರ ತಂಡ ನಿರ್ವಹಿಸುತ್ತಿದ್ದು, ಭಕ್ತರಿಗೆ ಯಾವುದೇ ರೀತಿಯಲ್ಲಿ ಚ್ಯುತಿಯಾಗದಂತೆ ನಗುಮುಖದ ಸೇವೆ ನೀಡಲಾಗುತ್ತದೆ.
ವಿಶಾಲವಾದ ಪಾರ್ಕಿಂಗ್
ಶತಚಂಡಿಕಾಯಾಗದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಾಹನಗಳ ಪಾರ್ಕಿಂಗಾಗಿ ವಿಶಾಲವಾದ ಜಾಗದ ವ್ಯವಸ್ಥೆ ಕಲ್ಪಿಸಲಾಗಿದೆ.ಇಲ್ಲಿನ ವ್ಯವಸ್ಥೆಯನ್ನು ನೋಡಿಕೊಳ್ಳಲು ಸ್ವಯಂಸೇವಕರ ತಂಡ ಕಾರ್ಯನಿರ್ವಹಿಸುತ್ತಿದೆ.