ಬಂಟ್ವಾಳ, ಮಾ.05 (DaijiworldNews/AA): ಖಾಸಗಿ ಸಿ.ಸಿ.ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಸರ್ಕಲ್ ಬಳಿ ಇಂದು ನಡೆದಿದೆ.

ಕೇರಳ ಮೂಲದ ವಿಶ್ವನಾಥ ಶೆಟ್ಟಿ ಗಂಭೀರವಾಗಿ ಗಾಯಗೊಂಡ ಕಾರು ಚಾಲಕ.
ಬಿಸಿರೋಡಿನ ಕಡೆಯಿಂದ ಮೆಲ್ಕಾರ್ ಕಡೆಗೆ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಿಶ್ವನಾಥ ಅವರ ಕಾರಿಗೆ ಮೆಲ್ಕಾರ್-ಪಾಣೆಮಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ನಿಯಮ ಮೀರಿದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಜೊತೆಗೆ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.