ಉಡುಪಿ,ಮಾ.06(DaijiworldNews/ AK): 2003ರ ನ.17ರಂದು ರಾತ್ರಿ ನಟ್ಟಿರುಳಿನಲ್ಲಿ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೊಲೀಸ್ ಇಲಾಖೆಯ ಈದು ನಕ್ಸಲ್ ಎನ್ಕೌಂಟರ್ನಿಂದ ಸಂಪೂರ್ಣ ಶಿಥಿಲಗೊಂಡ ಮನೆಗೆ ಇದುವರೆಗೆ ನಯಾಪೈಸೆ ಪರಿಹಾರವನ್ನು ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯೂ ನೀಡಿಲ್ಲ ಎಂದು ಮನೆಯ ಯಜಮಾನರಾದ ರಾಮಪ್ಪ ಪೂಜಾರಿ ಅವರ ಮಗ ಪ್ರಶಾಂತ ಪೂಜಾರಿ ಅಸಮಾಧಾನ ಹೊರಹಾಕಿದ್ದಾರೆ.

ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಗುಂಡಿನ ಚಕಮಕಿ ವೇಳೆ ನಮ್ಮ ಮನೆ ಸಂಪೂರ್ಣ ಶಿಥಿಲವಾಗಿತ್ತು. ಮನೆಯನ್ನು ನಿರ್ಮಿಸಿಕೊಡುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿತು. ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಸರಕಾರ ಹಾಗೂ ಅಧಿಕಾರಿಗಳು ನೂತನ ಮನೆ ನಿರ್ಮಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆಯನ್ನು ಮೌಖಿಕವಾಗಿ ನೀಡಿದ್ದರು ಎಂದು ಪ್ರಶಾಂತ್ ಪೂಜಾರಿ ತಿಳಿಸಿದರು.
ಎನ್ಕೌಂಟರ್ ನಡೆದ ದಿನಗಳಲ್ಲಿ ವಿವಿಧ ಸಚಿವರು, ಜನಪ್ರತಿನಿಧಿಗಳು, ರಾಜಕಾರಣಿಗಳು ಮನೆಯ ಮುಂದೆ ಬಂದು ಸಾಂತ್ವನ ಹೇಳಿದ್ದರು. ಆಗಿನ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ಚಿರಂಜೀವಿ ಸಿಂಗ್ ಸಹ ಮನೆಗೆ ಬಂದು ಪರಿಹಾರದ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೂ ಈಡೇರಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪುರುಷೋತ್ತಮ್, ಈದು ಗ್ರಾಮ ಅರಣ್ಯ ಸಮಿತಿಯ ರಾಜು ಪೂಜಾರಿ, ಸುಧಾಕರ ಪೂಜಾರಿ, ರಾಮಪ್ಪ ಪೂಜಾರಿ ಅವರ ಮಗ ಯಶೋಧರ ಉಪಸ್ಥಿತರಿದ್ದರು