ಕಾಸರಗೋಡು, ಮಾ.06 (DaijiworldNews/AA): ಕ್ವಾರಿ ಮೆನೇಜರ್ ನನ್ನು ಅಡ್ಡಗಟ್ಟಿ ಕೋವಿ ತೋರಿಸಿ ಬೆದರಿಸಿ 10.20 ಲಕ್ಷ ರೂ ದರೋಡೆಗೈದ ತಂಡದ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಹಾರ ಮೂಲದವರಾದ ಮುಹಮ್ಮದ್ ಇಬ್ರಾಹಿಂ ಆಲಂ(21), ಮುಹಮದ್ ಮಾಲಿಕ್(21), ಮುಹಮ್ಮದ್ ಫಾರೂಕ್(26) ಎಂಬವರನ್ನು ಕರ್ಣಾಟಕ ಪೊಲೀಸರ ನೆರವಿನೊಂದಿಗೆ ಮಂಗಳೂರಿನಿಂದಲೂ ಅಸ್ಸಾಂ ನಿವಾಸಿ ಧನಂಜಯ (21) ಎಂಬಾತನನ್ನು ಕಾಞಂಗಾಡಿನಿಂದಲೂ ಬಂಧಿಸಲಾಗಿದೆ.
ಬುಧವಾರ ಸಾಯಂಕಾಲ ಈ ದರೋಡೆ ಘಟನೆ ನಡೆದಿತ್ತು. ಕಾಞಂಗಾಡಿನಲ್ಲಿ ಕಾರ್ಯಾಚರಿಸುತ್ತಿರುವ ಜಾಸ್ ಗ್ರೆನೇಟ್ ಅಗ್ರಿಗೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೆನೇಜರ್ ಕೋಜಿಕ್ಕೋಡ್ ನಿವಾಸಿ ಪಿ.ಪಿ.ರವೀಂದ್ರನ್(56)ರನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು.
ಕೆಲಸ ಮುಗಿಸಿ ಮನೆಗೆ ತೆರಳಲು ಆಟೋ ರಿಕ್ಷಾ ಕಾಯುತ್ತಿದ್ದ ವೇಳೆ ಮೂರು ಮಂದಿಯ ತಂಡಕೋವಿ ತೋರಿಸಿ ಬೆದರಿಸಿ ಹಣವಿರುವ ಚೀಲದೊಂದಿಗೆ ಪರಾರಿಯಾಯಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬೆನ್ನಟ್ಟಿದಾಗ ಆರೋಪಿಗಳು ರೈಲು ಹತ್ತಿ ಪರಾರಿಯಾದ ಬಗ್ಗೆ ಬೆಳಕಿಗೆ ಬಂದಿದೆ. ಅದರಂತೆ ಮಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಗಿದ್ದು, ಮೂರು ಮಂದಿ ಆರೋಪಿಗಳು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಬಂಧಿಸಲಾಯಿತು.
ಆರೋಪಿಗಳ ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣದ ಮುಖ್ಯ ಆರೋಪಿ ಧನಂಜಯ ಬೋರ ಅಂತ ತಿಳಿಯಿತು. ಆತನನ್ನು ಕಾಞಂಗಾಡಿನಿಂದ ಬಂಧಿಸಲಾಯಿತು.