ಉಡುಪಿ, ಮಾ.07(DaijiworldNews/TA): ಬಜೆಟ್ ಕುರಿತಾಗಿ ರಾಜ್ಯದ ಜನತೆಗೆ ಸಾಕಷ್ಟು ನಿರೀಕ್ಷೆಯಿತ್ತು. ಸಿದ್ದರಾಮಯ್ಯನವರ ಬಜೆಟ್ ಹಿಂದುಳಿದ ಹಾಗೂ ದಲಿತರ ಪಾಲಿಗೆ ನಿರಾಶಾದಾಯಕವಾಗಿದೆ. ರಾಜ್ಯದ 50 ಶೇ. ಹಿಂದುಳಿದ ವರ್ಗದವರಿಗೆ ಒಂದೇ ಒಂದು ಯೋಜನೆ ಘೊಷಿಸಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಜೆಟ್ ಅಸಮಧಾನ ವ್ಯಕ್ತಪಡಿಸಿದರು.

ಅವರು ಉಡುಪಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಘೋಷಣೆಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯನವರು ತಮ್ಮನ್ನು ದೇವರಾಜ ಅರಸರ ಪ್ರತಿರೂಪ, ಪರಿಶಿಷ್ಟ ಜಾತಿ-ಪಂಗಡ, ದಲಿತರಿಗೆ ನ್ಯಾಯ ಕೊಡುವ ವ್ಯಕ್ತಿ ಎಂದು ಹೇಳುತ್ತಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ 8 ಹಿಂದುಳಿದ ವರ್ಗದ ಸಮುದಾಯಕ್ಕೆ ನಿಗಮ ಘೋಷಣೆ ಮಾಡಿದ್ದೆವು. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲಿ 250 ಕೋಟಿ ರೂ. ಅನುದಾನದ ಭರವಸೆ ಈಡಿಗ ಸಮುದಾಯಕ್ಕೆ ನೀಡಲಾಗಿತ್ತು. ಹಿಂದುಳಿದ ವರ್ಗಗಳ ಸಮುದಾಯದ ನಿಗಮಗಳಿಗೆ ಬಜೆಟ್ ನಲ್ಲಿ ಒಂದು ರೂಪಾಯಿ ಮೀಸಲಿಟ್ಟಿಲ್ಲ.
ಕರಾವಳಿ ಮೀನುಗಾರಿಕೆಗೆ ಬಹುತೇಕ ಉತ್ತೇಜನ ನೀಡುವ ಅವಕಾಶವಿತ್ತು. ಕೇಂದ್ರ ಸರ್ಕಾರದ ಮತ್ಸ್ಯ ಸಂಪತ್ತು ಯೋಜನೆಯಡಿ ಮೀನುಗಾರರಿಗೆ ಶಕ್ತಿ ಕೊಡುವ ಕೆಲಸವಷ್ಟೆ ಆಗಿದೆ. ಹಿಂದುಳಿದ ವರ್ಗದಲ್ಲಿ 1500 ಹಾಸ್ಟೆಲ್ ಸಮರ್ಪಕ ಸ್ಥಿತಿಯಲ್ಲಿಲ್ಲದೆ ಮಕ್ಕಳು ಕಂಗಾಲಾಗಿದ್ದಾರೆ. 75 ಸಾವಿರ ಮಕ್ಕಳು ಹಾಸ್ಟೆಲ್ ನಿರೀಕ್ಷೆಯಲ್ಲಿದ್ದಾರೆ. ಒಂದೇ ಒಂದು ಘೋಷಣೆ ಮಾಡಿಲ್ಲ.ಹಿಂದುಳಿದ ವರ್ಗ ದಲಿತರಿಗೆ ವಂಚಿಸುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಸಿದ್ದರಾಮಯ್ಯ ದೃಷ್ಟಿಯಲ್ಲಿ ಹಿಂದೂಗಳು, ಹಿಂದುಳಿದವರು, ಪರಿಶಿಷ್ಟ ಜಾತಿ- ಪಂಗಡದವರು ಕಡಿಮೆ ಸಮಾನರು ಎಂಬಂತೆ ಬಜೆಟ್ ಘೋಷಣೆಯಾಗಿದೆ ಎಂದು ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದರು.