ಮಂಗಳೂರು, ಮಾ.08(DaijiworldNews/TA): ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿದ್ದ 5ಜಿ ಜಾಮರ್ ಉಪಕರಣಗಳ ಮೇಲೆ ಉಪ್ಪು ಸುರಿದು ನಿಷ್ಕ್ರಿಯಗೊಳಿಸಲು ಯತ್ನಿಸಿದ 9 ಮಂದಿ ಕೈದಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಲ್ಲಿ ಈ ಮೊದಲು 2ಜಿ/3ಜಿ ಮಾದರಿಯ ಮೊಬೈಲ್ ಜಾಮರ್ ಇತ್ತು. ಇತ್ತೀಚೆಗೆ ಅದನ್ನು 5ಜಿ ಆಗಿ ಮೇಲ್ದರ್ಜೆಗೇರಿಸಲು ಟಿಐಸಿಎಲ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಇದರಂತೆ ಸಂಸ್ಥೆ 5ಜಿ ಜಾಮರ್ ಉಪಕರಣಗಳನ್ನು ಅಳವಡಿಸಿದ್ದರು.
ಈ ನಡುವೆ ಜೈಲಿನ ‘ಎ’ ಮತ್ತು ‘ಬಿ’ ವಿಭಾಗಗಳಲ್ಲಿ ಅಳವಡಿಸಲಾಗಿದ್ದ ಜಾಮರ್ ಉಪಕರಣಗಳನ್ನು ಉಪ್ಪು ಸುರಿದು ಕೈದಿಗಳು ಕೆಡಿಸಲು ಪ್ರಯತ್ನ ಪಟ್ಟಿದ್ದು, ಈ ಬಗ್ಗೆ ಸಂಸ್ಥೆಯವರು ಕಾರಾಗೃಹ ಮತ್ತು ಸುಧಾರಣ ಸೇವೆ ಇಲಾಖೆಯ ಮಹಾನಿರ್ದೇಶಕರಿಗೆ ವರದಿ ನೀಡಿದ್ದಾರೆ. ವರದಿಯ ಆಧಾರದಲ್ಲಿ ಜೈಲಿನ ಅಧೀಕಕ್ಷ ಎಂ.ಎಚ್. ಆಶೇಖಾನ್ ಅವರು ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.