ಮೂಡುಬಿದಿರೆ, ಮಾ.08(DaijiworldNews/AK): ಶಿರ್ತಾಡಿ - ಮೂಡುಬಿದ್ರಿ ರಾಜ್ಯ ಹೆದ್ದಾರಿಯ ಶಿರ್ತಾಡಿ ಸೇತುವೆ ಬಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಶಿಕ್ಷಕಿಯೋರ್ವರು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ವೇಳೆಗೆ ಸಂಭವಿಸಿದೆ.

ಮೂಡುಬಿದ್ರಿ ನಾಗರಕಟ್ಟೆಯ ನಿವಾಸಿಯಾಗಿದ್ದು, ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಸುಜಯ ಭಂಡಾರಿ (35) ಘಟನೆಯಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ.
ಶುಕ್ರವಾರ ಸಂಜೆ ವೇಳೆಗೆ ತನ್ನ ಕರ್ತವ್ಯ ಮುಗಿಸಿ ಮೂಡಬಿದಿರೆ ನಾಗರಕಟ್ಟೆಯಲ್ಲಿರುವ ಮನೆಗೆ ಆಕ್ವಿವಾದಲ್ಲಿ ಹೋಗುತ್ತಿದ್ದರು.
ಶಿರ್ತಾಡಿ ಸೇತುವೆ ಬಳಿ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಕಾರು ಏಕಾಏಕಿಯಾಗಿ ಆಕ್ವಿವಾಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ದೂರಕ್ಕೆ ತಳ್ಳಲ್ಪಟ್ಟ ಸವಾರೆ,ಶಿಕ್ಷಕಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು.
ತಲೆಭಾಗಕ್ಕೆ ತೀವ್ರ ಗಾಯಗೊಂಡಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ.
ಮೃತ ಶಿಕ್ಷಕಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರಿಗಿಬ್ಬರು ಅವಳಿಜವಳಿ ಮಕ್ಕಳಿದ್ದು ಮೂಡುಬಿದಿರೆ ಶಾಲೆಯಲ್ಲಿ ಕಲಿಯುತ್ತಿದ್ದಾರೆ.ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.