ಮಂಗಳೂರು, ಮಾ.09 (DaijiworldNews/AA): ಕಾಂಗ್ರೆಸ್ ಕಾರ್ಯಕರ್ತರನ್ನು ನಿರಂತರವಾಗಿ ನಿಂದಿಸುವುದು, ಹೀಯಾಳಿಸುವುದು, ಅಗೌರದಿಂದ ಕಾಣುವುದು ಶಾಸಕರಾಗಿ ವೇದವ್ಯಾಸ ಕಾಮತ್ರಿಗೆ ಶೋಭೆಯಲ್ಲ ಎಂದು ಎಂಎಲ್ಸಿ ಐವನ್ ಡಿಸೋಜ ಹೇಳಿದರು.

ನಾವೂ ಒಂದು ರಾಜಕೀಯ ಪಕ್ಷದವರು. ಅವರು ಚುನಾವಣೆಯಲ್ಲಿ ಗೆದ್ದು ಎಂಎಲ್ಎ ಆಗಿರಬಹುದು. ಗೆದ್ದ ಬಳಿಕ ಅವರು ಎಲ್ಲರ ಶಾಸಕರು. ಇನ್ನು ಮುಂದೆಯಾದರೂ ಅವರು ಈ ರೀತಿಯಲ್ಲಿ ನಡೆದುಕೊಳ್ಳದಿರುವುದು ಉತ್ತಮ ಎಂದರು.
ಶಕ್ತಿನಗರ ನಾಲ್ಯಪದವು ಎಂಬಲ್ಲಿ ದೇವಸ್ಥಾನದ ಕಾರ್ಯಕ್ರಮಕ್ಕೆ ಬಂದು ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಅವರನ್ನು ಉದ್ದೇಶಿಸಿ 'ನೀವು ದೇವಸ್ಥಾನಕ್ಕೆ ಕಲ್ಲು ಹೊಡೆಯುವವರು ಇಲ್ಲಿಗೇಕೆ ಬಂದಿದ್ದೀರಿ?' ಎಂದು ಪ್ರಶ್ನಿಸಿದ್ದರು. ಬಳಿಕ ವೇದಿಕೆಯಲ್ಲೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಈ ಬಗ್ಗೆ ಆಕ್ಷೇಪಣೆ ಎತ್ತಿದ್ದಕ್ಕೆ ಯಶವಂತ ಪ್ರಭು ಮೇಲೆ ಹಲ್ಲೆಯನ್ನು ನಡೆಸಲಾಗಿತ್ತು. ಬಳಿಕ ಅವರ ಮೇಲೆ ದಲಿತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಕೇಸು ದಾಖಲಿಸಿದ್ದಾರೆ. ಅವರೋರ್ವ ಶಾಸಕರಾಗಿ ಪ್ರಚೋದನಾಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಮಾತನಾಡಿ, ವೇದವ್ಯಾಸ ಕಾಮತ್ ಅವರು ತಾನು ಆ ರೀತಿ ಮಾತನಾಡಿಲ್ಲವೆನ್ನುದಾದರೆ ಅವರು ಯಾವ ದೇವಸ್ಥಾನಕ್ಕೆ ಪ್ರಮಾಣಕ್ಕೆ ಕರೆದರೂ ಬರುತ್ತಾರೆಯೇ?. ಇದು ಮೊದಲಲ್ಲ ಅವರು ನನ್ನನ್ನು ನಿಂದಿಸಿರುವುದು, ಹಿಂದೆಯೂ ಅವರು 'ಮುಸ್ಲಿಮರಿಗೆ ಹುಟ್ಟಿದವನು', 'ನಿನ್ನ ಮನೆ, ಜಾಗಯನ್ನು ವಕ್ಫ್ಗೆ ಬರೆದುಕೊಡಬೇಕು' ಎಂದು ಹೀಯಾಳಿಸಿದ್ದಾರೆ. ನಾನು ಅವರಿಗೆ ಹಾಗೆಂದರೆ ಅವರು ಬಿಡುತ್ತಾರೆಯೇ ಎಂದು ಸವಾಲೆಸೆದರು.