ಮಂಗಳೂರು, ಮಾ.10(DaijiworldNews/TA): ನಗರದ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘವು ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ಗೌರವದಿಂದ ಆಚರಿಸಿತು . ಸಂಘದ ಆವರಣದಲ್ಲಿ ನಡೆದ ಈ ಕಾರ್ಯಕ್ರಮವು ಮಹಿಳೆಯರ ಅಸಾಧಾರಣ ಸಾಧನೆಗಳನ್ನು ಗೌರವಿಸಲು ಮತ್ತು ಆಚರಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಎಸ್ ವಿ ಎಂಟರ್ಪ್ರೈಸಸ್ ನ ಗೌರವಾನ್ವಿತ ಸಂಸ್ಥಾಪಕಿ ಶ್ರೀಮತಿ ಅಶ್ವಿನಿ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮೊಂದಿಗೆ ಅವರ ಅನುಭವ ಮತ್ತು ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ತಮ್ಮ ಭಾಷಣದಲ್ಲಿ, ಶ್ರೀಮತಿ ಅಶ್ವಿನಿ ಮಂಜುನಾಥ್ ರವರು ಮೊದಲ ತಲೆಮಾರಿನ ಉದ್ಯಮಿಯಾಗಿ ತಮ್ಮ ಪ್ರಯಾಣದ ಒಳನೋಟಗಳನ್ನು ಹಂಚಿಕೊಂಡರು. ಅವರು ತಮ್ಮ ಪಯಣದಲ್ಲಿ ಎದುರಿಸಿದ ಸವಾಲುಗಳನ್ನು ವಿವರಿಸಿದರು. ಅವರ ಹೃದಯಸ್ಪರ್ಶಿ ಮಾತುಗಳು ದೃಢ ಸಂಕಲ್ಪ ಮತ್ತು ಸಹನಶೀಲತೆಯಿಂದ ತಮ್ಮ ಗುರಿಗಳನ್ನು ಸಾಧಿಸಲು ಪ್ರೇರೇಪಿಸಿದವು.
ಆಚರಣೆಯ ಪ್ರಮುಖ ಅಂಶವೆಂದರೆ ಆಯಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಪ್ರತಿಷ್ಠಿತ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಯಿತು. ಶ್ರೀಮತಿ ಚಿತ್ರ ಭಟ್, ಶ್ರೀಮತಿ ಕೃಷ್ಣಲೀಲಾ, ಶ್ರೀಮತಿ ಕಸ್ತೂರಿ ಮಹೇಶ್ , ಶ್ರೀಮತಿ ಪೂರ್ಣಿಮಾ ಭಟ್ ಹಾಗು ಶ್ರೀಮತಿ ನಯನ ಪ್ರದೀಪ್ ರವರನ್ನು ಅವರ ಅತ್ಯುತ್ತಮ ಕೊಡುಗೆ ಮತ್ತು ಅನುಕರಣೀಯ ಸಾಧನೆಗಳಿಗಾಗಿ ಶ್ಲಾಘಿಸಿ ಸನ್ಮಾನಿಸಲಾಯಿತು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶ್ರೀ ವಿಶಾಲ್ ಎಲ್. ಸಾಲಿಯನ್ ಅವರು ಮಹಿಳಾ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಮಂಗಳೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಬದ್ಧತೆಯನ್ನು ಸಾರಿದರು. ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಸಂಘದ ಕಾರ್ಯಗಳನ್ನು ಪುನರುಚ್ಚರಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರುತಿ ಜಿ.ಕೆ., ಸಹಾಯಕ ನಿರ್ದೇಶಕಿ, ಶಾಖಾ MSME DFO ಮತ್ತು ಶ್ರೀಮತಿ ಪ್ರೇಮಾ ಕಾಂಬ್ಳೆ , ಕೃಷಿ ಸಹಾಯಕ ನಿರ್ದೇಶಕಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದರು. ಅವರು ಮಹಿಳಾ ಸದಸ್ಯರಿಗೆ ಸ್ವಾವಲಂಬಿಯಾಗಿ ಬೆಳೆಯಲು ಹಾರೈಸಿದರು. ಶಿವಕುಮಾರ್, ಪ್ರಾಂಶುಪಾಲರು, ಮಹಿಳಾ ಐಟಿಐ, ಕದ್ರಿ ಹಿಲ್ಸ್ ಅವರು ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿ, ಇದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಮತ್ತು ಸಾಧನೆಗಳನ್ನು ಮಾನ್ಯತೆ ನೀಡುವ ಪ್ರತ್ಯಕ್ಷ ಸಂಕೇತವಾಗಿದೆ ಎಂದು ವಿವರಿಸಿದರು.