ಮಂಗಳೂರು, ಮಾ.11 (DaijiworldNews/AA): ಯಕ್ಷರಂಗವು ನನ್ನ ಬದುಕಿಗೆ ಅಭಿಮಾನಗಳ ಪ್ರೀತಿ ಮತ್ತು ಹೊಸತನದ ಸ್ಪೂರ್ತಿಯನ್ನು ನೀಡಿದೆ ಅದು ಮರೆಯಲಾದ ಅವಿಸ್ಮರಣೀ ಕ್ಷಣಗಳು ಎಂದು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಅವರು ಹೇಳಿದರು.

ಅವರು ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ 'ಬಳ್ಕೂರು ಯಕ್ಷ ಕುಸುಮ' ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನನ್ನ ತಂದೆವರು ಜಲವಳ್ಳಿ ವೆಂಕಟೇಶ್ ರಾವ್ ಅವರು ಯಕ್ಷಗಾನ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ. ಪ್ರತಿಯೊಬ್ಬ ಕಲಾವಿದರು ಕೂಡ ಹಿರಿಯವರು ಹಾಕಿಕೊಟ್ಟ ಯಕ್ಷಪರಂಪರೆಯನ್ನು ಮುಂದುವರಿಸುವ ಮೂಲಕ ತನ್ನ ತನವನ್ನು ಕಾಯ್ದುಕೊಳ್ಳಬೇಕು ಹೊರತು ನಕಲಿಸಬಾರದು ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನದಲ್ಲಿ ಅಪಾರವಾದ ಓದು, ಕಲಿಕೆ ಅಭ್ಯಾಸದ ಮೂಲಕ ಇಲ್ಲಿ ಕಲಾವಿದ ಬೆಳೆಯಬಹುದು. ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಆದರೆ ಬಹಳಷ್ಟು ಪ್ರೇಕ್ಷಕರನ್ನು ನಾವು ಗಳಿಸಿದ್ದೇವೆ ಅಂದರೆ ಅದು ಯಕ್ಷಗಾನದ ಶಕ್ತಿ ಅನ್ನುವುದು ನನ್ನ ನಂಬಿಕೆ. ಕಲಾಮಾತೆಯ ಅನುಗ್ರಹಕ್ಕೆ ನಾವು ಒಳಗಾಗಿದ್ದೇವೆ ಅನ್ನುವುದಕ್ಕೆ ಈ ಪುರಸ್ಕಾರವೇ ಸಾಕ್ಷಿ. ಜಲವಳ್ಳಿ ವೆಂಕಟೇಶ್ ರಾವ್ ಅವರ ಮಗನಾಗಿ ಒಂದ ಮಟ್ಟಿನ ಕಲಾವಿದನಾಗಿದ್ದೇನೆ ಎನ್ನುವ ಬಗ್ಗೆ ನನಗೆ ಹೆಮ್ಮೆ ಇದೆ. ಕಲಾಮಾಧ್ಯಮದ ಮೂಲಕ ನನ್ನ ತಂದೆಯವರು ಗಳಿಸಿದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಾವು ಸಾಧಿಸಬೇಕಾದ್ದು ಸಾಕಷ್ಟಿದೆ. ಯಕ್ಷಗಾನದ ಹಿರಿಯ ಚೇತನಗಳು ಶ್ರಮಸಿದ ರೀತಿ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. 'ಯಕ್ಷ ಕುಸುಮ ಪುರಸ್ಕಾರವು' ನನ್ನ ಮುಂದಿನ ಯಕ್ಷಬದುಕಿನಲ್ಲಿ ಇನ್ನಷ್ಟು ಸಾಧಿಸುವುದು ಇದೆ ಎನ್ನುವ ಎಚ್ಚರಿಕೆಯನ್ನು ಕೊಟ್ಟಿದ್ದೀರಿ ಎನ್ನುವ ಭರವಸೆಯೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು.
ವೇದಿಕೆಯಲ್ಲಿ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಎಸ್ಎಸ್ ನಾಯಕ್, ರಂಗಸ್ಥಳ ಮಂಗಳೂರು (ರಿ)ನ ಶ್ರೀ ಎಸ್ಎಲ್ ನಾಯಕ್ ಮತ್ತು ದಿನೇಶ್ ಪೈ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಅಣ್ಣಯ್ಯ ಕುಲಾಲ್, ದಿನಕರ ಎಸ್ ಬಳ್ಕೂರು, ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ ಬಳ್ಕೂರು, ನಾಗೇಶ್ ಎಸ್ ಬಳ್ಕೂರು, ಮೇಳದ ಯಜಮಾನರಾದ ರಂಜಿತ್ ಕುಮಾರ್ ವಕ್ವಾಡಿ, ಶ್ರೀಪತಿ ಆಚಾರ್ಯ ಉಪಸ್ಥಿತರಿದ್ಧರು.
ಯಕ್ಷ ಕುಸುಮ ಟ್ರಸ್ಟ್ ನ ಅಧ್ಯಕ್ಷರಾದ ಕರುಣಾಕರ ಬಳ್ಕೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಜಲವಳ್ಳಿ ವಿದ್ಯಾಧರ ರಾವ್ ಅವರ ಅಭಿನಂದನ ನುಡಿಗಳನ್ನಾಡಿದರು.
ಬಳಿಕ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ, ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ 'ಗದಾಯುದ್ಧ ಮತ್ತು ರಾಜಾ ರುದ್ರಕೋಪ' ಎಂಬ ಕಥಾನಕ ಪ್ರದರ್ಶನವು ನಡೆಯಿತು.
'ಗದಾಯುದ್ಧ' ಪ್ರಸಂಗದಲ್ಲಿ ಕೌರವನ ಪಾತ್ರವನ್ನು ವಿದ್ಯಾಧರ ರಾವ್ ಜಲವಳ್ಳಿ ಅವರು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು.