ಕಾರ್ಕಳ, ಮಾ.13 (DaijiworldNews/AA): ಕಾರ್ಕಳ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟೊ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ವಿರಾಜಪೇಟೆಯವರಾಗಿರುವ ಲೀನಾ ಬ್ರಿಟೊ ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರು, ಸುಳ್ಯ ಮೂಡಿಗೆರೆ ಪುರಸಭೆಗಳಲ್ಲಿ ಕಾರ್ಯನಿರ್ವಹಿಸಿದ್ದ ಲೀನಾ ಅವರು ಬಂಟ್ವಾಳ ಪುರಸಭೆಗೆ ತಲೆನೋವಾಗಿದ್ದ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ತ್ಯಾಜ್ಯ ವಿಂಗಡಣೆ ನಿರ್ವಹಣೆ ಘಟಕ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು.
ಈ ಹಿಂದೆ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೂಪಾ ಟಿ. ಶೆಟ್ಟಿ ಅವರು ಮೂಡುಬಿದಿರೆ ಸಮುದಾಯ ಸಂಘಟನಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ. ರೂಪಾ ಶೆಟ್ಟಿ ಅವರು 2021ರ ಮೇ ತಿಂಗಳಿನಲ್ಲಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.