ಮಂಗಳೂರು, ಮಾ.14 (DaijiworldNews/AK): ಬಜಪೆಯ ಪೇಜಾವರ ಮಾಗಣೆಯ ನೆಲ್ಲಿದಡಿಗುತ್ತು ಕಾಂತೇರಿ ಜುಮಾದಿ ದೈವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ಪೂರಕ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ ಮಾ.18ರಂದು ನಡೆಸಲು ಉದ್ದೇಶಿಸಿದ ಬಜಪೆ-ನೆಲ್ಲಿದಡಿಗುತ್ತು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ.

ಅದರ ಬದಲು ನೆಲ್ಲಿದಡಿ ಗುತ್ತು ಚಾವಡಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ನೆಲ್ಲಿದಡಿ ಉಳಿಸಿ ಹೋರಾಟ ಸಮಿತಿ ತಿಳಿಸಿದೆ.
ಹೋರಾಟ ಸಮಿತಿ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿರುವುದರಿಂದ ಪಾದಯಾತ್ರೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದರು.
ಎಪ್ರಿಲ್ನಲ್ಲಿ ಚಾವಡಿ ನೇಮ ನಡೆಯಲಿದ್ದು, ಸುಮಾರು ಒಂದೂವರೆ ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ ಎಂದರು. ನೆಲ್ಲಿದಡಿಗುತ್ತು ಗಡಿಪ್ರಧಾನರಾದ ಲಕ್ಷ್ಮಣ ಚೌಟ, ಮುಖಂಡರಾದ ಅಶ್ವಿನ್ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.