ಉಡುಪಿ,ಮಾ.14(DaijiworldNews/TA) : ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಸುಮಾರು 2೦೦ ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಎಲ್ ಐ ಸಿ ಪಾಲಿಸಿದಾರರು, ಅಂಗನವಾಡಿ ಕಾರ್ಯಕರ್ತೆಯರು ಕೂಡ ಬಲಿಯಾಗುವುದರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷರಾದ ಡಾ ರವೀಂದ್ರಾನಾಥ ಶ್ಯಾನುಭಾಗ್ ತಿಳಿಸಿದರು.

ಅವರು ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಹೆಹ್ಚ್ಚಿನ ಜೀವನ ಮಧುರ ಪಾಲಿಸಿದಾರರೂ ಕಟ್ಟಿದ್ದ ಕೋಟ್ಯಾಂತರ ರೂಪಾಯಿ ಎಲ್ ಐ ಸಿ ನೇಮಿಸಿದ ಮಧ್ಯವರ್ತಿಗಳು ಕಬಳಿಸಿದ ಘಟನೆಯಲ್ಲಿ ನ್ಯಾಯ ಪಡೆಯಲು ಬಡ ಪಾಲಿಸಿದಾರರು ಕಳೆದ 9 ವರ್ಷಗಳಿಂದ ಕಾಯುತ್ತಿದ್ದಾರೆ.
ಜೀವ ವಿಮಾ ನಿಗಮದ ಉಡುಪಿ ವಿಭಾಗಕ್ಕೆ ಸೇರಿದ ಕಡೂರು ತಾಲೂಕಿನ ಸುಮಾರು 200ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಎಲೈಸಿಯ ಪರವಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ಪಾಲಿಸಿದಾರರ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ಆಯಾ ಗ್ರಾಮಗಳಲ್ಲಿದ್ದ ಪಾಲಿಸಿದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳ ಪ್ರೀಮಿಯಮ್ ಹಣವನ್ನು ಎಲೈಸಿಯೇ ನೇಮಿಸಿದ್ದ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಅಧಿಕೃತ ರಸೀದಿಯನ್ನು ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರು ಇದೀಗ ಸರ್ವಸ್ವವನ್ನೂ ಕಳೆದುಕೊಂಡಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.
ಪ್ರಸ್ತುತ ರಾಜ್ಯ ಬಳಕೆದಾರರ ಆಯೋಗದಲ್ಲಿರುವ ಪೀಠ ಒಂದರಲ್ಲಿ ಅಧ್ಯಕ್ಷರನ್ನು ನೇಮಿಸದೇ ಇರುವುದರಿಂದಾಗಿ ಕಳೆದೊಂದು ದಶಕಗಳಿಂದ ಸಲ್ಲಿಸಲಾದ ಹೆಚ್ಚಿನೆಲ್ಲಾ ಬಳಕೆದಾರರ ದೂರುಗಳು ವಿಚಾರಣೆಗಾಗಿ ಬಾಕಿ ಉಳಿದಿವೆ. ಇದೇ ಪೀಠದಲ್ಲಿ ದಾಖಲಾಗಿರುವ ದಾವೆಯಲ್ಲಿ ಎಲ್ಐಸಿಯಿಂದಾಗಿ ಹಾನಿಗೊಳಗಾದ ಗ್ರಾಹಕರು ಪ್ರಸ್ತುತ ನ್ಯಾಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.