ಉಡುಪಿ, ಮಾ.16 (DaijiworldNews/AA): ನಗರದ ಮೂಡುನಿಡಂಬೂರು ಗರಡಿ ಬಳಿಯ ಗದ್ದೆಗೆ ಶನಿವಾರ ಸಂಜೆ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಉಡುಪಿ ನಗರದಲ್ಲಿ ಸಂಪೂರ್ಣ ಹೊಗೆ ಆವರಿಸಿತ್ತು. ಸುತ್ತಲೂ ಒಳಚರಂಡಿಯಿರುವ ಗದ್ದೆಯಿಂದ ಬೆಂಕಿ ಆ ಪ್ರದೇಶವನ್ನು ಮೀರಿ ಹೊರಕ್ಕೆ ವ್ಯಾಪಿಸಲಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ರಾತ್ರಿ ವರೆಗೂ ನಗರದಾದ್ಯಂತ ಹೊಗೆ ಆವರಿಸಿತ್ತು. ಬೆಂಕಿಯ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಇದ್ದ ಪರಿಣಾಮ ಮುನ್ನೆಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಪ್ರತ್ಯೇಕ ಘಟನೆಯಲ್ಲಿ ಮಣಿಪಾಲದ ಎಂಐಟಿ ಬಳಿಯ ಕಸದ ರಾಶಿಗೂ ಬೆಂಕಿ ಹತ್ತಿಕೊಂಡಿದ್ದು, ಅಗ್ನಿಶಾಮಕ ದಳದವರು ನಂದಿಸಿದರು.