ಮಂಗಳೂರು, ಮಾ.16 (DaijiworldNews/AA): ಸಿಐಟಿಯು ಸಂಯೋಜಿತ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ 117ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಂಗಳೂರಿನ ಕ್ಲಾಕ್ ಟವರ್ ಬಳಿ ನಡೆಯಿತು.

ಕಾರ್ಯಕ್ರಮವನ್ನು ಸಿಐಟಿಯು ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷೆ ರಾಧಾ ಮೂಡುಬಿದಿರೆ ಅವರು ಉದ್ಘಾಟಿಸಿ ಮಾತನಾಡಿದರು. ಸಮಿತಿಯ ಮುಖಂಡರಾದ ಪದ್ಮಾವತಿ ಶೆಟ್ಟಿ ಮಾತನಾಡಿ, 'ಜಾಗತೀಕರಣದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಭಾರತದಲ್ಲಿ ಮಹಿಳೆಯರ ದುಡಿಮೆಯನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಕಡಿಮೆ ಕೂಲಿಗೆ ಗರಿಷ್ಠ ಅವಧಿವರೆಗೆ ದುಡಿಸುವ ಮೂಲಕ ಮಹಿಳೆಯರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ' ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಸಮಾಜದ ಅಭಿವೃದ್ಧಿ ಯಾವತ್ತೂ ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಮುಖಂಡರಾದ ಈಶ್ವರಿ ಬೆಳ್ತಂಗಡಿ, ನಳಿನಾಕ್ಷಿ ಶೆಟ್ಟಿ, ಭಾರತಿ ಬೋಳಾರ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಕಿರಣ ಪ್ರಭಾ, ಅಸುಂತ ಡಿಸೋಜ, ಸಿಐಟಿಯು ಜಿಲ್ಲಾ ಘಟಕದ ಪ್ರಮುಖರಾದ ಜೆ.ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ರೈತ ನಾಯಕರಾದ ಸದಾಶಿವ ದಾಸ್ ಮತ್ತಿತರರು ಭಾಗವಹಿಸಿದ್ದರು.