ಮಂಗಳೂರು, ಮಾ.16 (DaijiworldNews/AA): ಕರ್ನಾಟಕ ರಾಜ್ಯದ ಇತಿಹಾದಲ್ಲಿಯೇ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಸುಮಾರು 75 ಕೋಟಿ ರೂ ಮೌಲ್ಯದ 37.87 ಕೆ ಜಿ ತೂಕದ ಎಂಡಿಎಂಎ ಡ್ರಗ್ಸನ್ನು ಮಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.






ರಾಜ್ಯಕ್ಕೆ ಮತ್ತು ಇತರ ಸ್ಥಳಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಪ್ರಜೆಗಳನ್ನು ಬೆಂಗಳೂರಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬಂಬಾ ಫಂಟಾ (31) ಮತ್ತು ಅಬಿಗೈಲ್ ಅಡೊನಿಸ್ (30) ಎಂಬವರನ್ನು ಬಂಧಿಸಲಾಗಿದೆ.
2024ರಲ್ಲಿ ಪಂಪ್ ವೆಲ್ ಬಳಿ ಲಾಡ್ಜ್ವೊಂದರಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹೈದರ್ ಆಲಿ ಎಂಬಾತನನ್ನು ಬಂಧಿಸಲಾಗಿತ್ತು. ಈತನಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್ ನೈಜಿರಿಯಾದ ಪ್ರಜೆ ಪೀಟರ್ ಇಕೆಡಿ ಬೆಲೊನ್ವೊ ಎಂಬಾತನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈತನಿಂದ 6.248 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.
ಈತನ ಹಿನ್ನೆಲೆಯನ್ನು ಬೆನ್ನತ್ತಿ ಹೋದ ಮಂಗಳೂರು ಸಿಸಿಬಿ ಪೊಲೀಸರು ಆರು ತಿಂಗಳ ನಿರಂತರ ತನಿಖೆಯಿಂದ ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ದೆಹಲಿಯಿಂದ ಬೆಂಗಳೂರಿಗೆ ಮತ್ತು ದೇಶದ ಇತರ ಸ್ಥಳಗಳಿಗೆ ಎಂಡಿಎಂಎ ವಿಮಾನ ಮಾರ್ಗದ ಮೂಲಕ ಪೂರೈಕೆ ಮಾಡುತ್ತಿದ್ದ ಮಾಹಿತಿ ದೊರಕಿತ್ತು.
ಮಾರ್ಚ್ 14ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ದಕ್ಷಿಣ ಆಫ್ರಿಕಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅವರ ಬಳಿಯಿದ್ದ ಎರಡು ಟ್ರಾಲಿ ಬ್ಯಾಗ್ ಗಳಲ್ಲಿ ಸಾಗಾಟ ಮಾಡಿದ್ದ 75 ಕೋಟಿ ರೂ ಮೌಲ್ಯದ 37.585 ಕೆಜಿ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.