ಮಂಗಳೂರು, ಮಾ.16 (DaijiworldNews/AA): ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೋರ್ವ ಮಂಗಳೂರು ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ನಡೆದಿದೆ.

ಪ್ರಕಾಶ್ ಗೋಪಾಲ ಮೂಲ್ಯ (43) ಆತ್ಮಹತ್ಯೆಗೆ ಶರಣಾದ ಆರೋಪಿ.
ಇಂದು ಮುಂಜಾನೆ ಸುಮಾರು 4- 4.50ರ ನಡುವೆ ಈ ಘಟನೆ ನಡೆದಿದೆ. ಆರೋಪಿ ಪ್ರಕಾಶ್ ಗೋಪಾಲ ಶೌಚಾಲಯದ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಜೈಲು ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅದಾಗಲೇ ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಆರೋಪಿ ಪ್ರಕಾಶ್ ಗೋಪಾಲ ಮೂಲ್ಯ, ಮೂಡುಬಿದಿರೆಯ ಲಾಡಿ ಎಂಬಲ್ಲಿ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ಆತ ಅದೇ ಪರಿಸರದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮೂಡುಬಿದರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಆರೋಪಿ ಪ್ರಕಾಶ್ ಕುಡಿದು ಬಂದು ಮನೆಯಲ್ಲಿ ಪತ್ನಿಗೂ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.
ಮಾ.11 ರಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಆರೋಪಿ ಪ್ರಕಾಶ್ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಸಿಗುವುದಿಲ್ಲ. ತನ್ನನ್ನು ಯಾರೂ ಬಿಡಿಸಲು ಬರುವುದಿಲ್ಲ ಎಂದು ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.