ಮಂಗಳೂರು, ಮಾ.22 (DaijiworldNews/AA): ನಗರದ ಎಂ.ಜಿ. ರಸ್ತೆಯುದ್ದಕ್ಕೂ ಸಿಮೆಂಟ್ ಮಿಕ್ಸ್ ಮಾಡಿದ ಕಾಂಕ್ರೀಟನ್ನು ಚೆಲ್ಲಿ ಹೋದ ಸಿಮೆಂಟ್ ಮಿಕ್ಸರ್ ಲಾರಿಯನ್ನು ಹಿಂಬಾಲಿಸಿಕೊಂಡು ಹೋಗಿ ಹಂಪನಕಟ್ಟೆಯಲ್ಲಿ ತಡೆದು ನಿಲ್ಲಿಸಿ ಅದರ ಚಾಲಕನನ್ನು ಗೃಹರಕ್ಷಕದಳದ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ ಕರೆ ತಂದು ಚೆಲ್ಲಿದ ಕಾಂಕ್ರೀಟನ್ನು ತೆರವುಗೊಳಿಸಿದ ಘಟನೆ ಮಾ. 21ರಂದು ನಡೆದಿದೆ.

ಮಾ. 21ರ ಮಧ್ಯಾಹ್ನ ಸಿಮೆಂಟ್ ಮಿಕ್ಸರ್ ಲಾರಿ ಚಲಿಸುತ್ತಿದ್ದಾಗ ಸಿಮೆಂಟ್ ಮಿಕ್ಸ್ ಮಾಡಿದ ಜಲ್ಲಿ ಹುಡಿ ಲಾಲ್ಭಾಗ್ನಿಂದ ಹಂಪನಕಟ್ಟೆ ವರೆಗೆ ರಸ್ತೆಯ ಮೇಲೆ ಚೆಲ್ಲಿದೆ. ಪರಿಣಾಮ ಬಳ್ಳಾಲ್ಭಾಗ್ನಲ್ಲಿ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಇದರಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಇದನ್ನು ಗಮನಿಸಿದ ಮಾರ್ಕ್ ಸೆರಾ ಸಿಮೆಂಟ್ ಮಿಕ್ಸರ್ ಲಾರಿಯನ್ನು ತನ್ನ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದು, ಹಂಪನಕಟ್ಟೆಯಲ್ಲಿ ಅದನ್ನು ತಡೆದು ನಿಲ್ಲಿಸಿ ಚಾಲಕನನ್ನು ಸ್ಥಳಕ್ಕೆ ಕರೆ ತಂದಿದ್ದಾರೆ.
ಅಲ್ಲದೆ ರಸ್ತೆಯಲ್ಲಿ ಚೆಲ್ಲಿದ ಜಲ್ಲಿ ಹುಡಿಯನ್ನು ಕಾರ್ಮಿಕರೊಬ್ಬರ ಜತೆಗೂಡಿ ತೆರವುಗೊಳಿಸಿದ್ದಾರೆ. ಆ ಮೂಲಕ ಹಲವು ಮಂದಿ ದ್ವಿಚಕ್ರ ಸವಾರರು ಬೀಳುವ ಸಾಧ್ಯತೆಯನ್ನು ತಪ್ಪಿಸಿದ್ದಾರೆ. ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ಮಾರ್ಕ್ ಸೆರಾ ಕರ್ತವ್ಯದಲ್ಲಿ ಇರದಿದ್ದರೂ ಕೂಡ ಸೇವಾಮನೋಭಾ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.