ಬಂಟ್ವಾಳ, ಏ.01 (DaijiworldNews/AA): ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿಸಿರೋಡು ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮ ಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಏ.4 ರಿಂದ ಏ.9ರ ವರೆಗೆ ವೈಭವಯುತವಾಗಿ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ತಿಳಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಪೂರಕವಾಗಿ ಏ.3 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಬಿಸಿರೋಡಿನ ಕೈಕಂಬ ದ್ವಾರದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಚೆಂಡೆವಾದನ ಹಾಗೂ ಗೊಂಬೆ ಕುಣಿತ, ಭಜನಾ ತಂಡಗಳ ಕುಣಿತ ಭಜನೆ ಯನ್ನೂ ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಏ. 4 ರಿಂದ ಏ.9 ರವರೆಗೆ ವಿವಿಧ ವೈದಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ದೇವಸ್ಥಾನದ ಬಲಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ, ಎಡಭಾಗದಲ್ಲಿರುವ ವಿಶಾಲ ಸ್ಥಳದಲ್ಲಿ ಪ್ರತಿ ನಿತ್ಯ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಬಿಸಿರೋಡಿನ ಹೃದಯ ಭಾಗದಲ್ಲಿರುವ ರಕ್ತೇಶ್ವರಿ ದೇವಸ್ಥಾನದಲ್ಲಿ ಮೂರನೇ ಬಾರಿಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯುವ ದೃಷ್ಟಿಯಿಂದ ಬೇರೆ ಬೇರೆ ಸಮಿತಿಗಳು ಹಾಗೂ ಸ್ವಯಂ ಸೇವಕರ ತಂಡ ರಾತ್ರಿಹಗಲು ಸೇವಾ ರೂಪದಲ್ಲಿ ಕೆಲಸಗಳನ್ನು ಮಾಡುತ್ತಿದೆ. ಇದರ ಜೊತೆಗೆ ಬಿಸಿರೋಡು ನಗರವನ್ನು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸ್ವಾಗತಿಸುವ ಬ್ಯಾನರ್ ಮತ್ತು ಆಕರ್ಷಣೆಯ ರೂಪದಲ್ಲಿ ಸಿಂಗರಿಸುವ ಕೆಲಸಗಳನ್ನು ಸ್ಥಳೀಯ ಯುವಕರ ತಂಡ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ, ಪ್ರತಿನಿತ್ಯ ಎಂಟರಿಂದ ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಚಂಡಿಕಾಪರಮೇಶ್ವರಿ ಹಾಗೂ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಸುಪಾಸಿನಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ಕಾಲ್ನಡಿಗೆಯಲ್ಲಿಯೇ ದೇವಸ್ಥಾನಕ್ಕೆ ಬರುವ ಮೂಲಕ ನೆರೆ ಊರಿನ ಭಕ್ತರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ರಕ್ತೇಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ, ಸಮಿತಿ ಸದಸ್ಯ ನ್ಯಾಯವಾದಿ ಎಂ.ಆಶ್ವನಿ ಕುಮಾರ್ ರೈ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಐತ್ತಪ್ಪ ಪೂಜಾರಿ, ಕೋಶಾಧಿಕಾರಿ ನಾರಾಯಣ ಹೆಗ್ಡೆ, ಸಹಕೋಶಾಧಿಕಾರಿ ವಸಂತ ರಾವ್, ಆರ್ಥಿಕ ಸಮಿತಿ ಸಂಚಾಲಕ ಸತೀಶ್ ಶೆಟ್ಟಿ ಕುಳತ್ತಬೆಟ್ಟು, ಹೊರೆ ಕಾಣಿಕೆ ಸಮಿತಿ ಸಂಚಾಲಕ ಬೇಬಿಕುಂದರ್, ಸ್ವಾಗತ ಸಮಿತಿ ಸಹಸಂಚಾಲಕ ಚಿತ್ತರಂಜನ್ ಶೆಟ್ಟಿ ಬೊಂಡಾಲ ಮೊದಲಾದವರು ಉಪಸ್ಥಿತರಿದ್ದರು.