ಬಂಟ್ವಾಳ, ಏ. 02(DaijiworldNews/TA):ವಿಶ್ವಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಎ.6 ರಂದು ಬೆಳಿಗ್ಗೆ 5.30 ಕ್ಕೆ ಅಮ್ಮನೆಡೆಗೆ ನಮ್ಮ ನಡಿಗೆ ಬೃಹತ್ ಪಾದಯಾತ್ರೆ ನಡೆಯಲಿದೆ ಎಂದು ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ತಿಳಿಸಿದರು. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎ.6 ರಂದು ಬೆಳಿಗ್ಗೆ 5.30 ಕ್ಕೆ ಸರಿಯಾಗಿ ಪೊಳಲಿ ದ್ವಾರ ಕಡೆಗೋಳಿ ಪುದು ತುಂಬೆ, ಪೊಳಲಿ ದ್ವಾರ ಕೈಕಂಬ ಬಿಸಿರೋಡು ಮತ್ತು ಪೊಳಲಿ ದ್ವಾರ ಗುರುಪುರ ಕೈಕಂಬ ಈ ಮೂರು ಕಡೆಗಳಿಂದ ಪಾದಯಾತ್ರೆಗೆ ಚಾಲನೆ ದೊರಕಲಿದ್ದು, ಅಂತಿಮವಾಗಿ ಮೂರು ಕಡೆಗಳಿಂದ ಬರುವ ಭಕ್ತಾದಿಗಳು ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಲೋಕಕಲ್ಯಾಣಾರ್ಥವಾಗಿ ಹಾಗೂ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಕ್ರಮಬದ್ದವಾಗಿ ಜಾರಿಗೊಳಿಸಬೇಕು,ಕ್ಷೇತ್ರದ ವತಿಯಿಂದ ಗೋಶಾಲೆ ನಿರ್ಮಾಣ ಆಗಬೇಕು, ಹಿಂದೂ ಸಮಾಜಕ್ಕೆ ಧಾರ್ಮಿಕ ಶಿಕ್ಷಣದ ಅಗತ್ಯ ತೆ ಇರುವುದರಿಂದ ಬಾಲ ಸಂಸ್ಕಾರ ಕೇಂದ್ರದಂತಹ ಧಾರ್ಮಿಕ ಶಿಕ್ಷಣ ಕೇಂದ್ರ ಸ್ಥಾಪನೆ ಮಾಡಬೇಕು, ಬಡ ಹಿಂದೂ ಕುಟುಂಬಗಳಿಗೆ ನೆರವಾಗುವಂತೆ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಬೇಕು, ಶ್ರೀ ಕ್ಷೇತ್ರದ ಜಾತ್ರಾ ಸಮಯದಲ್ಲಿ ಪವಿತ್ರ ಗೋಹತ್ಯೆ ಹಾಗೂ ಭಕ್ಷಣೆ ಮಾಡುವ ಮುಸಲ್ಮಾನರಿಗೆ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ಅವಕಾಶ ನೀಡಬಾರದು ಎಂಬ ಮನವಿಯನ್ನು ಮಾಡಲಿದ್ದೇವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕೃಷ್ಣಪ್ಪ ಕಲ್ಲಡ್ಕ,ಭರತ್ ಕುಮ್ಡೆಲು, ಸಂತೋಷ್ ಸರಪಾಡಿ,ಕೇಶವ ದೈಪಲ, ರಾಜೇಶ್ ಗಂಜಿಮಠ ಉಪಸ್ಥಿತರಿದ್ದರು.