ಉಡುಪಿ, ಏ.04 (DaijiworldNews/AA): ರಾಜ್ಯದಲ್ಲಿ ಹಾಲು ಮತ್ತು ವಿದ್ಯುತ್ ದರ ಏರಿಕೆಯ ಬೆನ್ನಲ್ಲೆ ಡೀಸೆಲ್ ಹಾಗೂ ಟೋಲ್ ದರದಲ್ಲಿ ಹೆಚ್ಚಳ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳದೊಂದಿಗೆ ಖಾಸಗಿ ಸಾರಿಗೆ ಸಂಪರ್ಕ ವ್ಯವಸ್ಥೆಯ ದರ ಏರಿಕೆಯಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿರುವ ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಡೀಸೆಲ್ ದರ ಏರಿಕೆಯೊಂದಿಗೆ ಟೋಲ್ ದರವು ಏರಿಕೆ ಆಗಿರುವುದು ಬಸ್ ಸಹಿತ ಗೂಡ್ಸ್ ವಾಹನಗಳು ಹಾಗೂ ಡೀಸೆಲ್ ಆಧಾರಿತವಾಗಿ ಸಂಚರಿಸುವ ವಾಹನ ಮಾಲಕರಿಗೆ ಇನ್ನಷ್ಟು ಹೊರೆಯಾಗಿದೆ. ಮಂಗಳೂರು-ಉಡುಪಿ-ಕುಂದಾಪುರ-ಭಟ್ಕಳ ಮಾರ್ಗದಲ್ಲಿ ಹೆಚ್ಚಿನ ಖಾಸಗಿ ಬಸ್ಗಳು ಸಂಚರಿಸುವುದರಿಂದ ಟೋಲ್ ದರ ಏರಿಕೆಯೂ ದೊಡ್ಡ ಹೊಡೆತ ತಂದಿದೆ. ಅನಿವಾರ್ಯವಾಗಿ ಬಸ್ ಟಿಕೆಟ್ ದರವನ್ನು ಏರಿಸಬೇಕಾದೀತು ಎಂದು ಹೇಳಿದ್ದಾರೆ.
ಕೆಲವು ತಿಂಗಳ ಹಿಂದಷ್ಟೆ ಡೀಸೆಲ್ಗೆ 3 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ೨ ರೂ. ಹೆಚ್ಚಳ ಮಾಡಿದ್ದಾರೆ. ಟೋಲ್ ದರವೂ ಹೆಚ್ಚಳ ಆಗಿರುವುದರಿಂದ ತಿಂಗಳಿಗೆ ಸರಿ ಸುಮಾರು 25 ಸಾವಿರ ರೂ.ಗಳಷ್ಟು ಹೆಚ್ಚು ಹೊರೆ ಬೀಳಲಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಅನಿವಾರ್ಯ. ಈ ಬಗ್ಗೆ ಸರಕಾರಕ್ಕೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಶೀಘ್ರವೇ ಬಸ್ ಮಾಲಕರ ಸಂಘದ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.
ಲಾರಿ, ಟೆಂಪೊ, ಟ್ಯಾಕ್ಸಿ ಸಹಿತ ಗೂಡ್ಸ್ ವಾಹನಗಳಲ್ಲಿ ಡೀಸೆಲ್ ಚಾಲಿತವೂ ಹೆಚ್ಚಿವೆ. ಡೀಸೆಲ್ ದರ ಏರಿಕೆಯಿಂದ ಜನರ ನಿತ್ಯದ ಬದುಕಿನ ಮೇಲೆಯೂ ಪರಿಣಾಮ ಬೀರಲಿದೆ. ಸರಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದೆ ಇನ್ನಷ್ಟು ಸಮಸ್ಯೆಯಾಗಲಿದೆ. ಈ ಬಗ್ಗೆ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎಂಬುದನ್ನು ಶೀಘ್ರ ಸಭೆ ಕರೆದು ನಿರ್ಧರಿಸುವುದಾಗಿ ಉಡುಪಿ ಟ್ಯಾಕ್ಸಿಮನ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದ ಜನ ಸಾಮಾನ್ಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದರ ವಿರುದ್ಧ ಸಿಐಟಿಯು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ತಿಳಿಸಿದರು.