ಬಂಟ್ವಾಳ, ಏ.05 (DaijiworldNews/AA): ಬಂಟ್ವಾಳದ ಶಂಬೂರು ಗ್ರಾಮದ, ಅಡೆಪಿಲ ಅಲಂಗಾರ ಮಾಡ ಕಲ್ಲಮಳಿಗೆ, ದಿಂಡಿಗ್ಕೆರೆ ಜೋಡುಸ್ಥಾನ ವಾರ್ಷಿಕ ನೇಮಕ್ಕೆ ಹೈಕೋರ್ಟ್ ಆದೇಶದ ಮೇರೆಗೆ ಗುರುವಾರ ಚಾಲನೆ ದೊರೆಯಿತು.

ಗ್ರಾಮದ ಕಮಿಟಿಗಳ ಗೊಂದಲ, ರಾಜಕೀಯ ಹಸ್ತಕ್ಷೇಪಗಳಿಂದ ಕಾಲಾವಧಿ ಉತ್ಸವವು ನಿಂತಿದ್ದ ಕಾರಣಕ್ಕೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದ ಗ್ರಾಮ ಸಮಿತಿ, ಅರಸು ವೈದ್ಯನಾಥ ಜುಮಾದಿ ಬಂಟ ದೈವಗಳ ಆರಾಧನಾ ಸಮಿತಿಯ ಅಧ್ಯಕ್ಷ ನವೀನ್ ಕೋಟ್ಯಾನ್, ಅಲಂಗರಮಾಡ ಶ್ರೀಕಲ್ಲಮಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ್, ಅಡೆಪಿಲ ಭಂಡಾರದ ಮನೆ ಟ್ರಸ್ಟ್ ಅಧ್ಯಕ್ಷ ಮೀನ ಭಗವಾನ್ ದಾಸ್ ಮತ್ತು ಜೋಡುಸ್ಥಾನ ಮುಖ್ಯಸ್ಥ ಎನ್ ಸೀತಾರಾಮ್ ಜಂಟಿಯಾಗಿ ಸಲ್ಲಿಸಿದ ರಿಟ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಪೊಲೀಸ್ ಮುಖ್ಯಸ್ಥರುಗಳಿಗೆ ನಿರ್ದೇಶನ ನೀಡಿ ಯಾವುದೇ ಅಡ್ಡಿ ಇರದಂತೆ ಉತ್ಸವ ನಡೆಸುವಂತೆ ಆದೇಶಿಸಿತು.
ಅಂತೆಯೇ ಗ್ರಾಮಸ್ಥರು, ಸಮಿತಿಯವರು ಭಕ್ತಿ ಉತ್ಸಾಹದಿಂದ ಕನಿಷ್ಟ ಅವಧಿಯಲ್ಲಿ ಉತ್ತಮ ತಯಾರಿ ನಡೆಸಿ ಮೊದಲ ದಿನದ ಶ್ರೀಧರ್ಮರಸು ದೈವದ ನೇಮವನ್ನು ಅಲಂಗಾರ ಮಾಡ ಶ್ರೀ ಕಲ್ಲಮಳಿಗೆ ಬರ್ಕೆ ವಲಸರಿಯನ್ನು ಆಚರಿಸಿದರು. ಜೋಗದ ಬಲಿಯ ನಂತರ ಜನರು ಹರಿಕೆ ಸಲ್ಲಿಸಿದರು. ಹಿರಿಯರು ಹಾಗೂ ಹಿತೈಶಿಗಳಾದ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ರವಿಶಂಕರ್ ಶೆಟ್ಟಿ ಬಡಾಜೆ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಜಗನ್ನಾಥ ಚೌಟ ಉತ್ಸವವನ್ನು ವೀಕ್ಷಿಸಿದರು.
ಹಿಂದೂ ಧಾರ್ಮಿಕ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಆಗಮಿಸಿ ನೇಮಕ್ಕೆ ಶುಭ ಕೋರಿದರು. ಗ್ರಾಮ ಉತ್ಸವ ಸಮಿತಿಯ ಉಪಾಧ್ಯಕ್ಷ ರಾಜೇಶ್, ಪಂಚಾಯತ್ ಅಧ್ಯಕ್ಷರು ಹಾಗೂ ಸಮಿತಿಯ ಕಾರ್ಯದರ್ಶಿಯಾದ ಸಂತೋಷ್ ಕುಮಾರ್, ಕೋಶಾಧಿಕಾರಿ ಕೀರ್ತನ್ ಪಿ, ಕೇಶವ ಬರ್ಕೆ, ರಾಮಚಂದ್ರ, ಯೋಗೀಶ್ ಸ್ಥಾನದ ಮನೆ, ಅಡೆಪಿಲ ಭಂಡಾರದ ಮನೆಯ ಕಾರ್ಯದರ್ಶಿ ನವೀನ್ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು.