ಮಂಗಳೂರು/ಉಡುಪಿ, ಏ.06 (DaijiworldNews/AA): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಸಂಜೆ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೆಳಗ್ಗೆಯೇ ಮೋಡ ಕವಿದ ವಾತಾವರಣವಿತ್ತು. ನಂತರ ಸಂಜೆ ವೇಳೆ ಮಳೆಯಾಗಿದೆ. ಪುತ್ತೂರು, ಬಾಲ್ನಾಡು, ಬೆಟ್ಟಂಪಾಡಿ, ಬಡಗನ್ನೂರು, ಕಡಬ, ಆಲಂಕಾರು, ಉಪ್ಪಿನಂಗಡಿ, ಹಿರೇಬಂಡಾಡಿ, ಬೆಳ್ತಂಗಡಿ, ಬಂದಾರು, ಕರಿಕ್ಕಳ, ಸುಳ್ಯ, ಪುಣಚ, ಬಾಯಾರು, ಬಂಟ್ವಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ತೀವ್ರ ಬಿಸಿಲಿನ ನಡುವೆಯೂ ಯೆಲ್ಲೋ ಅಲರ್ಟ್
ಮಂಗಳೂರು ನಗರದಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣದ ಜೊತೆಗೆ ಉರಿ ಸೆಕೆ ಕೂಡ ಇತ್ತು. ನಗರದಲ್ಲಿ 34.1 ಡಿ.ಸೆ ಗರಿಷ್ಠ ತಾಪಮಾನ ಮತ್ತು 25 ಡಿ.ಸೆ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಏಪ್ರಿಲ್ 6 ಮತ್ತು 7 ರಂದು ಕರಾವಳಿಯಾದ್ಯಂತ ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಪಂಜ ಮತ್ತು ಸುಬ್ರಹ್ಮಣ್ಯದಲ್ಲಿ ಉತ್ತಮ ಮಳೆ
ಸುಳ್ಯ ತಾಲೂಕಿನ ಪಂಜ, ನಿಂತಿಕಲ್ಲು, ಕಲ್ಮಡ್ಕ, ಕರಿಕ್ಕಳ, ಕುಕ್ಕೆ ಸುಬ್ರಹ್ಮಣ್ಯ, ಕುಲ್ಕುಂದ, ಕೈಕಂಬ ಮತ್ತು ಬಿಳಿನೆಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಸುಳ್ಯ ನಗರದಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗಿದೆ.
ಮಡಂತ್ಯಾರಿನಲ್ಲಿ ಬೃಹತ್ ಮರ ಬಿದ್ದು ಆಟೋ ರಿಕ್ಷಾ ಪುಡಿಪುಡಿ
ಭಾರಿ ಗಾಳಿ ಮಳೆಗೆ ಗೇರುಕಟ್ಟೆ ಖಂಡಿಗೆ ನೆಲ್ಲಿಕಟ್ಟೆ ಸಮೀಪದಲ್ಲಿ ಭಾರಿ ಗಾಳಿಗೆ ಬೃಹತ್ ಮರದ ಕೊಂಬೆಯೊಂದು ಮುರಿದು ಆಟೋ ರಿಕ್ಷಾ ಮೇಲೆ ಬಿದ್ದಿದೆ. ಘಟನೆಯಲ್ಲಿ ಆಟೋ ಎದುರಿನ ಭಾಗಕ್ಕೆ ಹಾನಿಯಾಗಿದ್ದು, ಗಾಜು ಪುಡಿ ಪುಡಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಉಡುಪಿ ಜಿಲ್ಲೆಯ ವಿವಿಧೆಡೆ ಮಳೆ
ಉಡುಪಿ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆಯ ಬಳಿಕ ಉತ್ತಮ ಮಳೆಯಾಗಿದೆ. ಉಡುಪಿ-ಮಣಿಪಾಲ, ಕಾರ್ಕಳ, ಕುಂದಾಪುರ, ಕಾಪು, ಕಟಪಾಡಿ, ಪಡುಬಿದ್ರಿ ಭಾಗದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.