ಬೆಳ್ತಂಗಡಿ, ಏ.06 (DaijiworldNews/AA): ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದ ಎಣಿಂಜೆಯ ಯುವ ಪ್ರತಿಭೆ ಬಾಲಕಿ ಶ್ರದ್ಧಾ ಶೆಟ್ಟಿ ಅವರು ಅತಿದೊಡ್ಡ ಹೂವಿನ ರಂಗೋಲಿ ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾರೆ.

ಸಾಂಪ್ರದಾಯಿಕ ಕಲಾ ಪ್ರಕಾರಗಳ ಬಗ್ಗೆ ಅವರಿಗಿರುವ ಸೃಜನಶೀಲತೆ ಮತ್ತು ಸಮರ್ಪಣೆಗೆ ಹೆಸರುವಾಸಿಯಾಗಿರುವ ಶ್ರದ್ಧಾ ಅವರು ಕೆಂಗುಲಾಬಿ, ಮಲ್ಲಿಗೆ, ಕೇಸರಿ ಮತ್ತು ಹಳದಿ ಚೆಂಡು ಹೂವು ಸೇರಿದಂತೆ ವಿವಿಧ ಬಣ್ಣಗಳ ಹೂವುಗಳನ್ನು ಬಳಸಿ ಈ ರಂಗೋಲಿಯನ್ನು ರಚಿಸಿದ್ದಾರೆ. ೮ ಅಡಿ ಅಗಲದ ಈ ರಂಗೋಲಿಯನ್ನು ಕೇವಲ 1 ಗಂಟೆ 40 ನಿಮಿಷಗಳಲ್ಲಿ ರಚಿಸಿದ್ದು, ಇದು ಅನೇಕರ ಗಮನ ಸೆಳೆದಿದೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.
ಇಂಡಿಯಾ ಬುಕ್ ಆಫ್ ಕೆಕಾರ್ಡ್ಸ್ ನಲ್ಲಿ ಅತೀ ದೊಡ್ಡ ಹೂವಿನ ರಂಗೋಲಿ ಎಂದು ಸೇರ್ಪಡೆಯಾಗಿರುವ ವಿಚಾರ 2025ರ ಫೆಬ್ರವರಿ 3ರಂದೇ ದೃಢಪಟ್ಟಿತ್ತು. ಆದರೆ ಪ್ರಮಾಣಪತ್ರವು ಅಧಿಕೃತವಾಗಿ ಏಪ್ರಿಲ್ 4 ರಂದು ಶ್ರದ್ಧಾ ಶೆಟ್ಟಿ ಕೈ ತಲುಪಿದೆ.
ಪ್ರಸ್ತುತ ಎಸ್ಡಿಎಂ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಶ್ರದ್ಧಾ ಅವರು ಈ ವಿಭಿನ್ನ ಗೌರವ ಪಡೆದಿದ್ದಕ್ಕೆ ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ಹೂವಿನ ಕಲೆಯನ್ನು ಇಂತಹ ವೇದಿಕೆಯಲ್ಲಿ ಪ್ರದರ್ಶಿಸಲು ಸಾಧ್ಯವಾಗಿದ್ದು ಹೆಮ್ಮೆ ಮತ್ತು ತೃಪ್ತಿಯ ವಿಷಯ ಎಂದು ಅವರು ಹೇಳಿದ್ದಾರೆ.