ಬಂಟ್ವಾಳ, ಏ.06 (DaijiworldNews/AA): ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಯುವತಿಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಶನಿವಾರದಂದು ಕೊಲ್ನಾಡು ಗ್ರಾಮದ ಕುಡ್ತಮುಗೈರಿನಲ್ಲಿ ಸ್ಥಳೀಯರು ಥಳಿಸಿದ್ದಾರೆ.

ಹಲ್ಲೆಗೊಳಗಾದ ಯುವಕನನ್ನು ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ ಸವಾದ್ (20) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸವಾದ್, ಮೊಬೈಲ್ ಫೋನ್ ಮೂಲಕ ಯುವತಿಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ, ತಡರಾತ್ರಿಯಲ್ಲಿ ವಿಡಿಯೋ ಕರೆ ಮಾಡುವಂತೆ ಒತ್ತಾಯಿಸುತ್ತಿದ್ದ ಮತ್ತು ಕೆಲವೊಮ್ಮೆ ಅಶ್ಲೀಲ ಬೇಡಿಕೆಗಳನ್ನು ಇಡುತ್ತಿದ್ದ ಎನ್ನಲಾಗಿದೆ.
ಈತನ ಕೃತ್ಯಗಳ ಬಗ್ಗೆ ಯುವತಿಯರಿಂದ ಮಾಹಿತಿ ಪಡೆದ ಯುವಕರ ಗುಂಪೊಂದು ಆತನಿಗೆ ಪಾಠ ಕಲಿಸಲು ನಿರ್ಧರಿಸಿತ್ತು. ಹುಡುಗಿಯೊಬ್ಬಳ ಹೆಸರಿನಲ್ಲಿ ಬೇರೊಂದು ನಂಬರ್ನಿಂದ ಆತನನ್ನು ಸಂಪರ್ಕಿಸಿದರು. ತಾನು ಯುವತಿಯೊಂದಿಗೆ ಮಾತನಾಡುತ್ತಿದ್ದೇನೆಂದು ನಂಬಿದ ಸವಾದ್, ಮೆಸೇಜ್ ಮಾಡಿ ಭೇಟಿಯಾಗಲು ಕುಡ್ತಮುಗೈರಿಗೆ ಬಂದಿದ್ದ. ಈ ವೇಳೆ ಅಲ್ಲಿಗೆ ಬಂದಾಗ, ಸ್ಥಳೀಯರು ಆತನನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆತನಿಗೆ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.