ಕುಂದಾಪುರ, ಏ.06 (DaijiworldNews/AA): ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಅರಾಟೆ ಸೇತುವೆ ಬಳಿ ಶನಿವಾರ ರಾತ್ರಿ ನಡೆದಿದೆ.

ಮೃತಪಟ್ಟ ಕಲಾವಿದರನ್ನು ಹಟ್ಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ (40) ಎಂದು ಗುರುತಿಸಲಾಗಿದೆ.
ಶಿರೂರಿನ ತೂದಳ್ಳಿಯಲ್ಲಿ ನಡೆಯಬೇಕಿದ್ದ ಹಟ್ಟಿಯಂಗಡಿ ಮೇಳದ ಆಟ ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಕಾರ್ಯಕ್ರಮ ರದ್ದಾದ ನಂತರ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಅವರು ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು.
ಅರಾಟೆ ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಏಕಮುಖ ಸಂಚಾರ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸಲಾಗಿತ್ತು. ಗೊಂದಲಕ್ಕೆ ಒಳಗಾದ ನಾರಾಯಣ ಪೂಜಾರಿ ಅವರು ಬದಲಾದ ಸಂಚಾರ ವ್ಯವಸ್ಥೆಯ ಅರಿವಿಲ್ಲದ ತಡೆಗೋಡೆಯಾಗಿ ಇರಿಸಲಾಗಿದ್ದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಬೈಕ್ ನಿಯಂತ್ರಣ ಕಳೆದುಕೊಂಡು ಬಿದ್ದು ಸಾವನ್ನಪ್ಪಿದ್ದಾರೆ.
ಈ ಸೇತುವೆಯಲ್ಲಿ ವರದಿಯಾದ ನಾಲ್ಕನೇ ಮಾರಣಾಂತಿಕ ಅಪಘಾತ ಇದಾಗಿದ್ದು, ಈ ಪ್ರದೇಶದ ಸುರಕ್ಷತಾ ಕ್ರಮಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ಕುಂದಾಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.