ಮಂಗಳೂರು, ಏ.07 (DaijiworldNews/AA): ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರ್ಕಾರಿ ಶಾಲೆಯ ಮಕ್ಕಳು ಶಾಲೆಯ ಆವರಣದಲ್ಲಿ ತಮ್ಮ ಕಲಿಕೆಯ ಭಾಗವಾಗಿ ತಾವೇ ಬೆಳೆಸಿದ ತರಕಾರಿಗಳು, ಹಣ್ಣುಗಳು ಮತ್ತು ಜೇನುತುಪ್ಪವನ್ನು ಬೆಂಗಳೂರಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾನುವಾರ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ನೀಡಿದರು.

ಮಕ್ಕಳನ್ನು ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ ಅವರು, ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿದರು. ವಿದ್ಯಾರ್ಥಿಗಳನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದ ಶಾಲಾ ಸಿಬ್ಬಂದಿಯನ್ನು ಸಹ ಅವರು ಶ್ಲಾಘಿಸಿದರು. ಇನ್ನು ಶಾಲೆಗೆ ಎರಡು ಕಂಪ್ಯೂಟರ್ ಗಳನ್ನು ಹಾಗೂ ಪ್ರೊಜೆಕ್ಟರ್ ಉಡುಗೊರೆಯಾಗಿ ನೀಡಿದರು.
ಈ ಸಂವಾದದ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.