ಸುಳ್ಯ, ಏ.07 (DaijiworldNews/AA): ತಾಯಿ ಮತ್ತು ಮಗ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮಗ ಸಾವನ್ನಪ್ಪಿ, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಎನ್ನುವಲ್ಲಿ ಭಾನುವಾರ ಸಂಭವಿಸಿದೆ.

ನಾಲ್ಕೂರು ಗ್ರಾಮದ ದೇರಪ್ಪಜ್ಜನಮನೆ ನಿವಾಸಿ ಕುಶಾಲಪ್ಪ ಗೌಡ ಅವರ ಮಗ ನಿತಿನ್ (32) ಮೃತಪಟ್ಟವರು. ಅವರ ತಾಯಿ ಸುಲೋಚನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಭಾನುವಾರ ಬೆಳಗ್ಗೆ ಇಬ್ಬರೂ ತೀವ್ರ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಮೃತ ನಿತಿನ್ ಐಟಿಐ ಪದವೀಧರರಾಗಿದ್ದು, ತಮ್ಮ ಜಮೀನಿನಲ್ಲಿ ಕೃಷಿಕರಾಗಿ ದುಡಿಯುತ್ತಿದ್ದರು. ಅವರು ಒಂದು ವರ್ಷದ ಹಿಂದೆ ದೀಕ್ಷಾ ಅವರನ್ನು ವಿವಾಹವಾಗಿದ್ದರು. ದೀಕ್ಷಾ ಅವರು ಸ್ಥಳೀಯ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಸಮಯದಲ್ಲಿ ದೀಕ್ಷಾ ತವರು ಮನೆಗೆ ಹೋಗಿದ್ದು, ಈ ಸಂದರ್ಭದಲ್ಲಿ ತಾಯಿ ಸುಲೋಚನಾ ಹಾಗೂ ಮಗ ನಿತಿನ್ ವಿಷ ಸೇವಿಸಿದ್ದರು ಎಂದು ವರದಿಯಾಗಿದೆ.
ಸ್ಥಳೀಯವಾಗಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ನಿತಿನ್ ಎಲ್ಲರೊಡನೆ ಆತ್ಮೀಯವಾಗಿದ್ದರು. ನಿತಿನ್ ತಂದೆ ಕುಶಾಲಪ್ಪ ಗೌಡರ ಆರೋಗ್ಯವೂ ಸುಸ್ಥಿರವಾಗಿಲ್ಲ ಎಂದು ಹೇಳಲಾಗಿದೆ.
ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.