ಮಂಗಳೂರು, ಏ.07 (DaijiworldNews/AA): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬ್ಯಾಲೆನ್ಸ್ ಗಾಗಿ ನಡೆಸುತ್ತಿರುವ ಸರ್ಕಸ್ ನಿಂದಾಗಿ ಜನರಿಗೆ ನೂರು ರೂಪಾಯಿ ಕೊಟ್ಟು ಸಾರ್ವಜನಿಕರ ಜೇಬಿನಿಂದ ಸಾವಿರ ರೂಪಾಯಿ ಕನ್ನ ಹಾಕುವ ಪಿಕ್ ಪಾಕೆಟ್ ಸರ್ಕಾರ ಇದಾಗಿದೆ. ಸಿದ್ದರಾಮಯ್ಯನವರ ದುಬಾರಿ ದುನಿಯಾದಿಂದಾಗಿ ಜನರು ತತ್ತರಿಸುತ್ತಿದ್ದಾರೆ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ತಿಳಿಸಿದ್ದಾರೆ.

ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರಕಾರದ ವಿರುದ್ಧ ಬಿಜೆಪಿ ವತಿಯಿಂದ ಏ. 9 ರಂದು ಮಂಗಳೂರಿನಲ್ಲಿ ನಡೆಯಲಿರುವ ಜನಾಕ್ರೋಶ ಯಾತ್ರೆಯಲ್ಲಿ ಮಂಗಳೂರು ಮಂಡಲದಿಂದ ಸುಮಾರು 3000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಮತ ಹಾಕಿದ ಮತದಾರರು ಹಿಡಿಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕರ್ನಾಟಕ ಭ್ರಷ್ಟಾಚಾರ, ಹಗರಣ, ರೈತರ, ಅಮಾಯಕರ, ಪ್ರತಿಪಕ್ಷದ ಕಾರ್ಯಕರ್ತರ ಆತ್ಮಹತ್ಯೆ, ಕೊಲೆ, ಲವ್ ಜಿಹಾದ್, ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಹಿಂದು ವಿರೋಧಿ ಹೇಳಿಕೆ, ದಬ್ಬಾಳಿಕೆ, ಬೆಲೆ ಏರಿಕೆ ಇವುಗಳಿಂದಲೇ ಸುದ್ದಿಯಾಗುತ್ತಿರುವುದು ದುರದೃಷ್ಟಕರ. ಹಾಲಿನ ದರವನ್ನು ಸತತವಾಗಿ ಮೂರನೇ ಬಾರಿಗೆ ಏರಿಕೆ ಮಾಡಿದೆ. ಆದರೆ ಕಳೆದ ಐದು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನೀಡಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದೆ ಎನ್ನುವ ಸಿದ್ದರಾಮಯ್ಯ ಮತ್ತು ಡಿಕೆಶಿ ಜೋಡಿ ರಾಜ್ಯದಲ್ಲಿ ಎರಡು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಜೆ.ಪಿ ಮಂಗಳೂರು ಮಂಡಲದ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಬಿ.ಜೆ.ಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟು, ಬಿ.ಜೆ.ಪಿ ಮಂಗಳೂರು ಮಂಡಲ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು ಉಪಸ್ಥಿತರಿದ್ದರು.