ಮಂಗಳೂರು/ಉಡುಪಿ, ಏ.08 (DaijiworldNews/AA): ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2025 ರ ಫಲಿತಾಂಶವನ್ನು ಇಂದು ಪ್ರಕಟಿಸಿದ್ದಾರೆ. ಉಡುಪಿ ಜಿಲ್ಲೆ 93.90 ಶೇ ಪಡೆದು ಪ್ರಥಮ ಸ್ಥಾನ ಗಳಿಸಿದ್ದು, 93.57 ಶೇ ಫಲಿತಾಂಶದೊಂದಿಗೆ ದ.ಕ 2ನೇ ಸ್ಥಾನ ಪಡೆದುಕೊಂಡಿದೆ.

ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಅವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕ ಪಡೆದು ಮೊದಲ ರ್ಯಾಂಕ್ ಪಡೆದಿದ್ದಾರೆ. ಕೆನರಾ ಪಿಯು ಕಾಲೇಜಿನ ದೀಪಶ್ರೀ ಅವರು ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 599 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಎಸ್.ಎ. ಇಂದು ಪಿಯು ಕಾಲೇಜಿನ ಸಂಜನಾ ಬಾಯಿ 600 ಕ್ಕೆ 597 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯ ಟಾಪರ್ ಅಮೂಲ್ಯ ಕಾಮತ್ ಅವರು ವಿಷಯವಾರು ಗಳಿಸಿದ ಅಂಕಗಳು ಹೀಗಿವೆ: ಇಂಗ್ಲಿಷ್ - 99, ಸಂಸ್ಕೃತ - 100, ಭೌತಶಾಸ್ತ್ರ - 100, ರಸಾಯನಶಾಸ್ತ್ರ - 100, ಗಣಿತ - 100 ಮತ್ತು ಕಂಪ್ಯೂಟರ್ ವಿಜ್ಞಾನ - 100.

ಈ ಮಧ್ಯೆ, ಉಡುಪಿಯ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೊದಲ 10 ರೊಳಗೆ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಆಸ್ತಿ ಎಸ್. ಶೆಟ್ಟಿ 595 ಅಂಕಗಳೊಂದಿಗೆ 4 ನೇ ಸ್ಥಾನ ಮತ್ತು ಭೂಮಿಕಾ ಆರ್ ಹೆಗ್ಡೆ 5 ನೇ ಸ್ಥಾನ ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಸಹನಾ ನಾಯಕ್ 594 ಅಂಕಗಳೊಂದಿಗೆ 6 ನೇ ಸ್ಥಾನ ಗಳಿಸಿದ್ದಾರೆ.