ಮಲ್ಪೆ, ಏ.16(DaijiworldNews/TA): ಮಲ್ಪೆ ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಸಂಭವಿಸಿದೆ. ಮಸೀದಿಯ ವ್ಯವಸ್ಥಾಪಕ ಸುಹೇಲ್ ನಿನ್ನೆ ಶೌಚಾಲಯಕ್ಕೆ ಹೋದಾಗ ನವಜಾತ ಶಿಶು ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿದ್ದು ಪತ್ತೆಯಾಗಿದೆ.

ತಕ್ಷಣವೇ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಶು ಜನನಕ್ಕೆ ಮೊದಲು ಅಥವಾ ಜನನದ ಸಮಯದಲ್ಲಿ ಮರಣ ಹೊಂದಿದ್ದು, ಯಾರೋ ಅಪರಿಚಿತರು ಆ ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡಿ, ಮಗುವಿನ ಜನನವನ್ನು ಮರೆಮಾಚಲು ಯತ್ನಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.