ಉಡುಪಿ, ಏ.21 (DaijiworldNews/AK):ಕೊಲ್ಲೂರಿನಲ್ಲಿ ನ್ಯಾಯಾಲಯದ ಆದೇಶ ನೆಪದಲ್ಲಿ ಮಾನವೀಯತೆ ಇಲ್ಲದೇ ಕಳೆದ ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದ ಸಮಾಜದಲ್ಲಿ ಅತೀ ನಿರ್ಲಕ್ಷಿತ ಹಾಗೂ ಸೂಕ್ಷ್ಮ ಸಮುದಾಯವಾದ ಕೊರಗ ಕುಟುಂಬದ ವಾಸ್ತವ್ಯದ ಮನೆಯನ್ನು ನಾಶ ಪಡಿಸಿರುವುದು ತೀರಾ ದುಃಖಕರ ಹಾಗೂ ದುರದೃಷ್ಟಕರ ಸಂಗತಿಯಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟೆ ಹೊಳೆ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆಯೂ ಸೇರಿದಂತೆ ಈ ಪ್ರಕರಣವು ಈ ಹಂತದವರೆಗೆ ಬರುವಲ್ಲಿ ಜಿಲ್ಲಾಡಳಿತ ನಡೆದುಕೊಂಡ ರೀತಿ ತೀರಾ ಖಂಡನೀಯ. ಹಲವು ವರ್ಷಗಳಿಂದ ಆ ಕುಟುಂಬವು ವಿವಾದಿತ ಎಂದು ಬಿಂಬಿತವಾಗಿರುವ ಜಾಗದಲ್ಲಿ ವಾಸ್ತವ್ಯವಿದ್ದರೂ ಸದ್ರಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ವಿಫಲವಾಗಿದ್ದು, ಮಾನವೀಯತೆಯಿಲ್ಲದ ಇಡೀ ಮಾನವ ಸಮಾಜ ತಲೆ ತಗ್ಗಿಸುವ ಈ ಕೃತ್ಯಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆ ಎಂದು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನೊಂದ ಕುಟುಂಬಕ್ಕೆ ಕೂಡಲೇ ಮೂರು ದಿನಗಳ ಒಳಗೆ ಪರಿಹಾರ ನೀಡಬೇಕು ಹಾಗೂ ಸೂಕ್ತವಾದ ಜಾಗ ಮಂಜೂರು ಮಾಡಿ ಗೌರವಯುತವಾದ ಜೀವನ ಕಟ್ಟಿ ಕೊಳ್ಳಲು ಬೇಕಾದ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು.ಇಲ್ಲವಾದರೆ ಬೇಡಿಕೆ ಈಡೇರುವವರೆಗೆ ನೊಂದ ಕೊರಗ ಕುಟುಂಬದ ಬಂಧುಗಳೊಂದಿಗೆ ಕೂಡಿಕೊಂಡು ಧರಣಿ ಕೂರಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ಎಚ್ಚರಿಕೆ ನೀಡಿದ್ದಾರೆ