ಮಂಗಳೂರು, ಮೇ. 22 (DaijiworldNews/ AK): ಕೊಂಕಣಿಯ ‘ಪ್ರಥಮ ಕಾದಂಬರಿ’ಯೆಂದು ಹೆಸರುಗಳಿಸಿದ “ಆಂಜೆಲ್” ಎಂಬ ಕಾದಂಬರಿಯು 1950 ರಲ್ಲಿ ಖ್ಯಾತ ಕೊಂಕಣಿ ಸಾಹಿತಿ ಜೋಕಿಮ್ ಸಂತಾನ್ ಆಲ್ವಾರಿಸ್ ಅವರಿಂದ ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿತು.

ವಿಶ್ವ ಯುದ್ಧಗಳ ನೆರಳಿನಲ್ಲಿ ಪರಿವರ್ತನೆ ಹೊಂದುತ್ತಿರುವ ಸಮಾಜದ ಚಿತ್ರಣವನ್ನು ಹಾಗೂ ಕೌಟುಂಬಿಕ ಬದುಕಿನ ತುಮುಲಗಳನ್ನು ಹಿಡಿದಿಡಲು ಈ ಕಾದಂಬರಿ ಪ್ರಯತ್ನಿಸುತ್ತದೆ. ಆ ಕಾಲದ ಹೆಸರಾಂತ ಕಾದಂಬರಿಕಾರರೂ ಹಲವು ಕಾದಂಬರಿಗಳ ಕತೃರಾದ ಜೊ. ಸಾ. ಆಲ್ವಾರಿಸ್ ರವರು ಈ ಕಾದಂಬರಿಯಲ್ಲಿ ಮಾಡಿರುವ ಪಾತ್ರ ಚಿತ್ರಣ ಹಾಗೂ ವಿಷಯ ವಿವರಣೆ ಅತ್ಯುನ್ನತ ಮಟ್ಟದಾಗಿದೆ.
ಅವರು ಬರೆದಿರುವ ಈ ಕಾದಂಬರಿಗೆ ಪ್ರಸ್ತುತ ಸಾಲಿನಲ್ಲಿ 75 ವರ್ಷ ತುಂಬಲಿದೆ. ಈ ಸವಿನೆನಪಿಗೆ ಹಾಗೂ ಇಂತಹ ಉನ್ನತ ಆದರ್ಶಗಳಿಂದ ಹಾಗೂ ಸಾಹಿತಿಕ ಸಂಪತ್ತಿನಿಂದ ತುಂಬಿರುವ ಕಾದಂಬರಿಯ ಕುರಿತು ಅಧ್ಯಯನ ಕಾರ್ಯಾಗಾರವೊಂದನ್ನು ಜುಲೈ 13 ರಂದು ಬೆಳಿಗ್ಗೆ 9.30 ಗಂಟೆಗೆ, ಮಂಗಳೂರಿನ ನಂತೂರಿನಲ್ಲಿರುವ ಸಂದೇಶ ಸಭಾಂಗಣದಲ್ಲಿ ನಡೆಸಲು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ನಿರ್ಧರಿಸಿದೆ.
ಮಾತ್ರವಲ್ಲದೆ ಸೂಕ್ತ ಭಾಷಾಂತರಕಾರರನ್ನು ಸೇರಿಸಿಕೊಂಡು ಈ ಕಾದಂಬರಿಯನ್ನು ಕನ್ನಡ, ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಭಾಷಾಂತರಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಮ್ ಸ್ಟ್ಯಾನಿ ಆಲ್ವಾರಿಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.